ನವದೆಹಲಿ: ಶುಕ್ರವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಭವಿಸಬೇಕಾಗಿದ್ದ ಭಾರಿ ಅಪಘಾತವೊಂದು ತಪ್ಪಿದೆ. ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಇಂಜಿನ್‌ನಿಂದ ಬೆಂಕಿ ಕಿಡಿ ಕಾರುತ್ತಿರುವ ದೃಶ್ಯ ಕಂಡು ಬಂದಿದೆ. ಕೂಡಲೇ ಪೈಲಟ್ ತರಾತುರಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ 6E2131 ವಿಮಾನದಲ್ಲಿ ಈ ಅವಘಡ ಸಂಭವಿಸಿದೆ. ಇಂಡಿಗೋ ನೀಡಿದ ಹೇಳಿಕೆಯಲ್ಲಿ ಇಡೀ ಘಟನೆ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ವಿವರಿಸಿದೆ. ಶುಕ್ರವಾರ ರಾತ್ರಿ 10.08 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ ಸಂಖ್ಯೆ 6E2131 ರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಐಜಿಐಎ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ.
ಈ ವಿಮಾನದಲ್ಲಿ 177 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಇದ್ದರು. ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಾಗ ವಿಮಾನ ಟೇಕಾಫ್ ಆಗಿತ್ತು. ಇದರ ಬೆನ್ನಲ್ಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಸದ್ಯಕ್ಕೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಿಮಾನವು ಯಾವಾಗ ಮತ್ತೆ ರೆಡಿಯಾಗುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಈ ಸಂಪೂರ್ಣ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ಆ ವಿಡಿಯೊದಲ್ಲಿ ವಿಮಾನವು ಟೇಕ್ ಆಫ್ ಮಾಡಲು ರನ್‌ವೇ ಮೇಲೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಬೆಂಕಿ ಕಿಡಿ ಕಂಡು ಬಂದಿದೆ. ನಂತರ ಬೆಂಕಿ ತೀವ್ರತೆ ಹೆಚ್ಚಾಗ ತೋಡಗುತ್ತಿತ್ತು. ಇದನ್ನು ಗಮನಿಸಿದ ಪೈಲಟ್ ತಕ್ಷಣ ರನ್‌ವೇಯಲ್ಲಿಯೇ ವಿಮಾನವನ್ನು ನಿಲ್ಲಿಸಿ ಎಲ್ಲ ಜನರನ್ನು ರಕ್ಷಿಸಿದ್ದಾರೆ.
ಓದಿ: ತಾಂತ್ರಿಕ ದೋಷದಿಂದಾಗಿ ಕರಾಚಿಯಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಕಳೆದ ಕೆಲವು ತಿಂಗಳುಗಳಲ್ಲಿ, ದೇಶದಲ್ಲಿ ಅನೇಕ ಬಾರಿ ವಿಮಾನಗಳ ತುರ್ತು ಲ್ಯಾಂಡಿಂಗ್ ಕಂಡುಬಂದಿದೆ. ಹೆಚ್ಚಿನ ಘಟನೆಗಳು ಸ್ಪೈಸ್‌ಜೆಟ್‌ನಲ್ಲಿ ಸಂಭವಿಸಿವೆ. ಆದರೆ ಈಗ ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳು ಸಹ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ. ತಾಂತ್ರಿಕ ದೋಷದಿಂದ ವಿಮಾನವನ್ನು ನಿಲ್ಲಿಸಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯಕ್ಕೆ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗಾಗಿ ಮತ್ತೊಂದು ವಿಮಾನದ ವ್ಯವಸ್ಥೆ ಮಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.
ಕೆಲವು ದಿನಗಳ ಹಿಂದೆ ಸ್ಪೈಸ್ ಜೆಟ್ ವಿಮಾನದಲ್ಲಿ ಇದೇ ರೀತಿಯ ತಾಂತ್ರಿಕ ದೋಷ ಕಂಡುಬಂದಿತ್ತು. ಸ್ಪೈಸ್‌ಜೆಟ್ ವಿಮಾನವು ಗೋವಾದಿಂದ ಹೈದರಾಬಾದ್‌ಗೆ ಹಾರಿತು. ಈ ವಿಮಾನ ಹೈದರಾಬಾದ್ ತಲುಪಿದ್ದು, ಪೈಲಟ್‌ಗಳು ಲ್ಯಾಂಡಿಂಗ್‌ಗೆ ಸಿದ್ಧತೆ ನಡೆಸಿದ್ದರು. ಆದರೆ ಇದ್ದಕ್ಕಿದ್ದಂತೆ ಇಡೀ ವಿಮಾನ ಹೊಗೆಯಿಂದ ತುಂಬಿತ್ತು. ಇದರಿಂದಾಗಿ ಪೈಲಟ್ ತಕ್ಷಣವೇ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ತುರ್ತು ಭೂಸ್ಪರ್ಶದ ವೇಳೆ ವಿಮಾನಯಾನ ಸಂಸ್ಥೆ ಆಕ್ಸಿಜನ್ ಮಾಸ್ಕ್ ಕೂಡ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದರು.
ಘಟನೆಯ ತನಿಖೆಗೆ ಆದೇಶಿಸಿದ ನಾಗರಿಕ ವಿಮಾನಯಾನ ಸಚಿವಾಲಯ: ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಗ್ಗೆ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು DGCA ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಓದಿ: ದೆಹಲಿಯಿಂದ ಜಬಲ್ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ