ನವದೆಹಲಿ: ದೆಹಲಿ ಸೇವೆಗಳ ವಿಧೇಯಕವನ್ನು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡಿಸಲಿದ್ದಾರೆ. ಮತ್ತೊಂದು ಕಡೆ, ದೆಹಲಿ ಸೇವೆಗಳ ತಿದ್ದುಪಡಿ ವಿಧೇಯಕದ ವಿರುದ್ಧ ವಿರೋಧ ಪಕ್ಷಗಳ ಬೆಂಬಲವನ್ನು ಕೋರುತ್ತಿರುವ ಆಮ್ ಆದ್ಮಿ ಪಕ್ಷ, ಪಕ್ಷದ ರಾಜ್ಯಸಭಾ ಸದಸ್ಯರಿಗೆ ಆಗಸ್ಟ್ 7 ಮತ್ತು 8 ರಂದು ಸದನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿಗೊಳಿಸಿದೆ.
ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಅವುಗಳಲ್ಲಿ 8 ಸದಸ್ಯ ಸ್ಥಾನಗಳು ಖಾಲಿ ಇವೆ. ಪ್ರಸ್ತುತ ರಾಜ್ಯಸಭೆಯ ಬಲಾಬಲ 237. ಹೀಗಾಗಿ, ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರ ಆಗಬೇಕಾದರೆ 119 ಸದಸ್ಯರ ಬೆಂಬಲ ಅಗತ್ಯವಾಗಿದೆ.
ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಸೇರಿದಂತೆ ಪ್ರತಿಪಕ್ಷಗಳ ಒಟ್ಟು ಬಲ ಒಟ್ಟು ಬಲ 105 ಆಗಿದೆ. ಇನ್ನು ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಆದರೆ, ಇಂದು ಕೇಂದ್ರ ಗೃಹ ಸಚಿವರು ಮಂಡಿಸುವ ಮಸೂದೆಗೆ ಆಂಧ್ರ ಸಿಎಂ ಜಗನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಮತ್ತು ಬಿಜು ಜನತಾ ದಳ (ಬಿಜೆಡಿ) ಬೆಂಬಲ ನೀಡಿವೆ.
ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರ: ಈಗಾಗಲೇ ಲೋಕಸಭೆಯಲ್ಲಿ ದೆಹಲಿ ಸೇವೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಈ ಸಂದರ್ಭದಲ್ಲಿ I.N.D.IA ಮೈತ್ರಿಕೂಟದ ಸದಸ್ಯರು ಸದನದಿಂದ ಹೊರ ನಡೆದಿದ್ದರು, ಬಳಿಕ ಆಗಸ್ಟ್ 3 ರಂದು ಧ್ವನಿ ಮತದಿಂದ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ದೆಹಲಿಯ ಸೇವೆಗಳ ಮೇಲೆ ಅಲ್ಲಿನ ರಾಜ್ಯ ಸರ್ಕಾರದ ಹಿಡಿತ ಇರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಕೇಂದ್ರ ಸರ್ಕಾರ, ಈ ಬಗ್ಗೆ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರೋಧಿಸಿದ್ದರು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ, ಎಲ್ಲ ಪ್ರತಿಪಕ್ಷಗಳ ಬೆಂಬಲ ಪಡೆಯಲು, ಎನ್ಡಿಎಯೇತರ ಪಕ್ಷಗಳ ಬೆಂಬಲಕ್ಕಾಗಿ ಪ್ರಮುಖ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದರು.
ಕೇಂದ್ರ ಸರ್ಕಾರ ಇಂದು ಮಂಡಿಸಲಿರುವ ವಿಧೇಯಕವನ್ನು ವಿರೋಧಿಸುವುದಾಗಿ ಎಎಪಿ ಘೋಷಿಸಿದೆ. ಈ ಬಗ್ಗೆ ಮಾತನಾಡಿರುವ ಆಪ್ ಸಚಿವ ಗೋಪಾಲ್ ರೈ, ’’ಈ ಮಸೂದೆಯನ್ನು ವಿರೋಧಿಸಿ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಪ್ರತಿಭಟನೆ ನಡೆಸಲಿವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಬಲವಂತವಾಗಿ ದೆಹಲಿಯ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಓದಿ:ದೆಹಲಿ ಅಧಿಕಾರಿಗಳ ಮೇಲಿನ ನಿಯಂತ್ರಣ ವಿಧೇಯಕ ವಿಚಾರ: ಇಂದು ಇಂಡಿಯಾ ಮಹತ್ವದ ಸಭೆ