ನವದೆಹಲಿ: ದೆಹಲಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ದಾಖಲೆಯ ಮಳೆ ಸುರಿದಿದೆ. ಮಾನ್ಸೂನ್ ಮುಗಿಯುವ ಹೊತ್ತಲ್ಲಿ ಭಾರೀ ಮಳೆ ಸುರಿದಿರುವುದು ಇದೇ ಮೊದಲಾಗಿದೆ. ನಗರದ ಹಲವು ಪ್ರದೇಶಗಳು ಮಳೆ ನೀರಿಗೆ ಜಲಾವೃತವಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿದೆ.
ಶನಿವಾರದಿಂದ ನಿರಂತರ ಮಳೆ ಸುರಿಯಾಗುತ್ತಿದ್ದು, ಹಲವು ಪ್ರಮುಖ ಮಾರ್ಗಗಳು ಜಲಾವೃತವಾಗಿವೆ. ಇದರಿಂದ ಸಂಚಾರ ಕ್ಷೀಣಿಸಿದೆ. ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಳೆಯಾಗುವುದು ವಿರಳ. ಈ ಅವಧಿ ದೆಹಲಿಯ ಭಾಗದಲ್ಲಿ ಚಳಿ ಆರಂಭವಾಗುವ ಕಾಲ. ಆದರೆ, ಈ ಬಾರಿ ಮೇಲ್ಮೈ ಗಾಳಿಯ ಕಾರಣ ವರುಣ ಆರ್ಭಟಿಸಿದ್ದಾನೆ.
ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯು ಹೊಸ ದಾಖಲೆ ಸೃಷ್ಟಿಸಿದೆ. ಕಳೆದೊಂದು ದಶಕದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಫ್ದರ್‌ಜಂಗ್ ನಗರವು ಕಂಡ ಅತಿ ಹೆಚ್ಚು ಮಳೆ ಇದಾಗಿದೆ. ಈ ಪ್ರದೇಶದಲ್ಲಿ ಹವಾಮಾನ ಕೇಂದ್ರ ಹೊಂದಿದ್ದು, 24 ಗಂಟೆಗಳಲ್ಲಿ 74 ಮಿಮೀ ದಾಖಲೆಯ ಮಳೆಯಾಗಿದೆ. ಈ ಹಿಂದೆ ಅಂದರೆ 1954 ರಲ್ಲಿ 172.7 ಮಿ.ಮೀ. ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯಾದ ಸ್ಕೈಮೆಟ್ ಟ್ವೀಟ್ ಮೂಲಕ ತಿಳಿಸಿದೆ.
2007 ರಿಂದ ದೆಹಲಿ ಎರಡನೇ ಬಾರಿಗೆ ಅತಿ ಹೆಚ್ಚು ಮಳೆ ಕಂಡಿದೆ. ಈಗಿನ ಮಳೆ ನಗರಕ್ಕೆ ಹೊಸ ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಶೇ.10 ಕ್ಕಿಂತ ಕೆಳಗೆ ಕುಸಿದಿದೆ. ಸೋಮವಾರದ ಬಳಿಕ ಮಳೆಯ ತೀವ್ರತೆ ತಗ್ಗುವ ಸಾಧ್ಯತೆಯಿದೆ. ದೆಹಲಿಯಲ್ಲದೇ, ಫರಿದಾಬಾದ್, ಗುರುಗ್ರಾಮ್ ಮತ್ತು ನೋಯ್ಡಾದಲ್ಲೂ ಭಾರೀ ಮಳೆ ಸುರಿದಿದೆ.
ಇನ್ನು, ಮಹಾರಾಷ್ಟ್ರಕ್ಕೂ ಮಳೆ ಎಚ್ಚರಿಕೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡದಲ್ಲಿ ಮಳೆ ಸುರಿದಿದೆ. ಇದು ಇನ್ನಷ್ಟು ರಾಜ್ಯಗಳಿಗೆ ವ್ಯಾಪಿಸುವ ಸಾಧ್ಯತೆ ಇದೆ ಎಂದು ಐಎಂಡಿ ಅಂದಾಜಿಸಿದೆ.
ಓದಿ: ಕಾಂಗ್ರೆಸ್ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ರಾತ್ರೋರಾತ್ರಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ