ನವದೆಹಲಿ: ದೇಶದಲ್ಲಿ ಈಗಾಗಲೇ ಕೋವಿಡ್ ಮೂರನೇ ಅಲೆ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಶನಿವಾರದಂದು ದೆಹಲಿಯಲ್ಲಿ 2,716 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ 3.64 ಇದೆ.
ಕಳೆದ ಮೇ 21 ರಿಂದ ನಿನ್ನೆಯೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು 1,796 ಹೊಸ ಪ್ರಕರಣಗಳು ವರದಿಯಾಗಿದ್ದವು.
ಶನಿವಾರ ಹೊರಡಿಸಿದ ಆರೋಗ್ಯ ಬುಲೆಟಿನ್ ಪ್ರಕಾರ, ದೆಹಲಿಯ ಆಸ್ಪತ್ರೆಗಳಲ್ಲಿ 8,883 ಕೋವಿಡ್ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಕೋವಿಡ್ ಸೋಂಕಿತರು ಸೇರಿದಂತೆ ಅನಾರೋಗ್ಯಕ್ಕೊಳಗಾದವರಿಗೆ 247 ಬೆಡ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 8,636 ಹಾಸಿಗೆಗಳು ಖಾಲಿ ಇವೆ.
ಕಳೆದ ಏಳು ತಿಂಗಳ ಅವಧಿಯಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದೀಗ ಹೊಸ ವರ್ಷದಂದೇ ದೈನಂದಿನ ಪ್ರಕರಣಗಳು 2000 ಸಂಖ್ಯೆಯನ್ನು ಮೀರಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 765 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 14,19,459ಕ್ಕೆ ಏರಿಕೆಯಾಗಿದೆ. ಶುಕ್ರವಾರ 4,410 ಇದ್ದ ಸಕ್ರಿಯ ಪ್ರಕರಣಗಳು ಶನಿವಾರ 6,360 ಕ್ಕೆ ಏರಿಕೆಯಾಗಿದೆ.
ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದು ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶನಿವಾರ ಹೇಳಿದ್ದಾರೆ.