ನವದೆಹಲಿ : ವಾಯುಮಾಲಿನ್ಯ ಮತ್ತು ಚಳಿಯಿಂದ ತತ್ತರಿಸುತ್ತಿರುವ ದೆಹಲಿಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಡೆಂಘೀ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ ಒಂದೇ ವಾರದಲ್ಲಿ 2,570 ಡೆಂಘೀ ಪ್ರಕರಣಗಳು (Dengue cases in Delhi) ದಾಖಲಾಗಿವೆ.
ಈ ವರ್ಷ ಜನವರಿಯಿಂದ ನವೆಂಬರ್ 13ರವರೆಗೆ ದೆಹಲಿಯಲ್ಲಿ ಒಟ್ಟು 5,277 ಡೆಂಘೀ ಪ್ರಕರಣ ವರದಿಯಾಗಿವೆ. ಇದು ಆರು ವರ್ಷಗಳಲ್ಲೇ ಅತಿ ಹೆಚ್ಚು ಕೇಸ್ ಆಗಿದೆ. ಈ ಪೈಕಿ 10 ಮಂದಿ ಮೃತಪಟ್ಟಿದ್ದಾರೆ.
2015ರಲ್ಲಿ ದೆಹಲಿಯಲ್ಲಿ ಏಕಾಏಕಿ ಡೆಂಘೀ ಉಲ್ಬಣಿಸಿ 10,000ಕ್ಕೂ ಅಧಿಕ ಮಂದಿ ರೋಗಕ್ಕೆ ತುತ್ತಾಗಿದ್ದರು. ಬಳಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿದೆ. 2016ರಲ್ಲಿ 4,431, 2017ರಲ್ಲಿ 4,726, 2018ರಲ್ಲಿ 2,798, 2019ರಲ್ಲಿ 2,036 ಹಾಗೂ 2020ರಲ್ಲಿ 1,072 ಪ್ರಕರಣ ಪತ್ತೆಯಾಗಿವೆ.
ಇದನ್ನೂ ಓದಿ: 9 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಡೆಂಘೀ ನಿಯಂತ್ರಿಸಲು ಕೇಂದ್ರದ ತಂಡ
ಕೋವಿಡ್ನಿಂದಾಗಿ ಉಂಟಾಗಿದ್ದ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಕಠಿಣ ಲಾಕ್ಡೌನ್ ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CArvind Kejriwal) ನಿಯಂತ್ರಿಸಿದ್ದರು. ಸಹಜ ಪರಿಸ್ಥಿತಿಗೆ ರಾಷ್ಟ್ರ ರಾಜಧಾನಿ ಬಂತು ಎನ್ನುವಷ್ಟರಲ್ಲಿ ವಾಯುಮಾಲಿನ್ಯದ ಸಮಸ್ಯೆ ತಲೆದೋರಿದೆ.
ಕಳೆದ ಕೆಲ ದಿನಗಳಿಂದ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (Delhi Air Quality Index) ಅತಿ ಕಳಪೆ ಮತ್ತು ಅಪಾಯಕಾರಿ ಹಂತದಲ್ಲಿದೆ. ಮತ್ತೊಂದೆಡೆ ತಾಪಮಾನ ಕೂಡ ಕಡಿಮೆಯಾಗುತ್ತಿದ್ದು, ಜನ ಚಳಿಯಿಂದ ತತ್ತರಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮಾಲಿನ್ಯ ಹೆಚ್ಚಳಕ್ಕೆ ಕೃಷಿ ತ್ಯಾಜ್ಯ ಸುಡುವುದೇ ಪ್ರಮುಖ ಕಾರಣವಲ್ಲ: ಸುಪ್ರೀಂಕೋರ್ಟ್