ನವದೆಹಲಿ: ಸಿಂಘು ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಕಳೆದ ಶುಕ್ರವಾರ ನಡೆದ ಘರ್ಷಣೆಗೆ ಸಂಬಂಧಿಸಿ ದೆಹಲಿ ಪೊಲೀಸರು ಅಲಿಪುರ ಠಾಣೆಯಲ್ಲಿ ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನವೆಂಬರ್ 27 ರಂದು, ಕೃಷಿ ಕಾನೂನುಗಳ ವಿರುದ್ಧ ವಿವಿಧ ರೈತ ಸಂಘಗಳು ಆಯೋಜಿಸಿದ್ದ ಪ್ರತಿಭಟನೆ ಹಿನ್ನೆಲೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆಗಳನ್ನು ಸಿಂಘು ಗಡಿಯಲ್ಲಿ ನಿಯೋಜಿಸಲಾಗಿತ್ತು.
ಪೊಲೀಸರ ಪ್ರಕಾರ, ಅಂದು ಮಧ್ಯಾಹ್ನ 12: 15ರ ಸುಮಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಿಂಘು ಗಡಿ ಬಳಿ ಆಗಮಿಸಿ ಹಿಂಸಾತ್ಮಕವಾಗಿ ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದ್ದರಂತೆ.
ಈ ವೇಳೆ ಪೊಲೀಸರು ನಿರ್ಮಿಸಿದ್ದ ಮುಳ್ಳಿನ ಬ್ಯಾರಿಕೇಡ್ ಬಳಿ ರೈತರು ಸಮೀಪಿಸುತ್ತಿದ್ದಂತೆ ಅವರನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಕೋವಿಡ್ -19 ಹಿನ್ನೆಲೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿರುವುದರಿಂದ ಪ್ರತಿಭಟನಾಕಾರರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಈ ರೀತಿ ಮಾಡಿದ್ದಾಗಿ ಪೊಲೀಸರು ತಮ್ಮ ಜಲ ಫಿರಂಗಿ ದಾಳಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಹಿಂಸಾತ್ಮಕ ಪ್ರತಿಭಟನಾಕಾರರನ್ನು ನಿಯಂತ್ರಿಸುವಾಗ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ರೆ, ಎರಡು ಸರ್ಕಾರಿ ವಾಹನಗಳು ಮತ್ತು ಒಂದು ಖಾಸಗಿ ಬಸ್ ಹಾನಿಗೊಳಗಾಗಿವೆ.
ಹೀಗಾಗಿ ಸಾರ್ವಜನಿಕ ಆಸ್ತಿ ಹಾನಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ದೆಹಲಿಯ ಹೊರವಲಯ ಡಿಸಿಪಿ ಗೌರವ್ ಶರ್ಮಾ ಹೇಳಿದ್ದಾರೆ. ಹಾನಿಗೊಳಗಾದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.