ನವದೆಹಲಿ: ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿರುವ ಮಾನ್ಸಾ ರಾಮ್ ಆಸ್ಪತ್ರೆಗೆ ದೆಹಲಿ ಪೊಲೀಸರು ಭಾನುವಾರ 20 ಆಮ್ಲಜನಕದ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿದ್ದಾರೆ.
ಮಾನ್ಸಾ ರಾಮ್ ಆಸ್ಪತ್ರೆಯಲ್ಲಿ 35 ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದ್ದು, ಸದ್ಯಕ್ಕೆ ನಮ್ಮಲ್ಲಿರುವ ಆಕ್ಸಿಜನ್ ಒಂದು ಗಂಟೆಗಿಂತಲೂ ಹೆಚ್ಚು ಸಮಯಕ್ಕೆ ಸಾಲುವುದಿಲ್ಲ. ಹಲವೆಡೆ ಸಹಾಯ ಕೋರಿದ್ದೇವೆ, ಆದರೆ ಎಲ್ಲರೂ ಆಮ್ಲಜನಕದ ಕೊರತೆ ಇರುವುದಾಗಿ ಹೇಳುತ್ತಿದ್ದಾರೆ ಎಂದು ನಿಹಾಲ್ ವಿಹಾರ್ ಪೊಲೀಸ್ ಠಾಣೆಗೆ ಆಸ್ಪತ್ರೆ ನಿರ್ದೇಶಕರು ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಕರೆ ಮಾಡಿ ತಿಳಿಸಿದ್ದರು.
ಇದನ್ನೂ ಓದಿ: ಕೈಗಾರಿಕಾ ಉದ್ದೇಶಕ್ಕೆ ಆಮ್ಲಜನಕದ ಪೂರೈಕೆ ನಿಷೇಧಿಸಿ: ರಾಜ್ಯಗಳಿಗೆ ಕೇಂದ್ರದ ಸೂಚನೆ
ಸಮಸ್ಯೆ ಅರಿತು ಸ್ಪಂದಿಸಿರುವ ಪೊಲೀಸರು ನಗರದ ಮುಂಡ್ಕಾ ಮತ್ತು ಬವಾನಾ ಆಕ್ಸಿಜನ್ ಸರಬರಾಜು ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯಿಂದಾಗಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಇದೆ ಎಂದು ಬವಾನಾ ಅಧಿಕಾರಿಗಳು ಹೇಳಿದ್ದಾರೆ. ಆದರೆ ಮಾನ್ಸಾ ರಾಮ್ ಆಸ್ಪತ್ರೆಯ ತುರ್ತು ಪರಿಸ್ಥಿತಿ ವಿವರಿಸಿ 10 ಸಿಲಿಂಡರ್‌ಗಳನ್ನು ತಕ್ಷಣವೇ ಪೊಲೀಸರು ಏರ್ಪಾಡು ಮಾಡಿದ್ದಾರೆ. ಅರ್ಧ ಗಂಟೆಯ ಬಳಿಕ ಮತ್ತೆ 10 ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ದೆಹಲಿ ಹೊರವಲಯ) ಸುಧಾಂಶು ಧಮಾ ಮಾಹಿತಿ ನೀಡಿದರು.
ಎಲ್ಲಿಯೂ ಸಹಾಯ ಸಿಗದ ವೇಳೆ ನೆರವಾದ ನಿಹಾಲ್ ವಿಹಾರ್ ಪೊಲೀಸರಿಗೆ ಮಾನ್ಸಾ ರಾಮ್ ಆಸ್ಪತ್ರೆ ನಿರ್ದೇಶಕ ಡಾ.ರವಿಂದರ್ ದಬಾಸ್ ಕೃತಜ್ಞತೆ ಅರ್ಪಿಸಿದ್ದಾರೆ.