ನವದೆಹಲಿ: ಕೋವಿಡ್‌ನಿಂದ ಮೃತಪಟ್ಟ ದೆಹಲಿ ಸಾರಿಗೆ ಸಂಸ್ಥೆಯ(ಡಿಟಿಸಿ) ಬಸ್ ಚಾಲಕನ ಮನೆಗೆ ಕಂದಾಯ ಸಚಿವ ಕೈಲಾಶ್ ಗೆಹ್ಲೋಟ್ ಸೋಮವಾರ ಭೇಟಿ ಮಾಡಿ ₹1 ಕೋಟಿ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು. ಬಸ್ ಚಾಲಕ ಲಾಲ್ ಸಿಂಗ್ ಎಂಬುವವರಿಗೆ ಜೂನ್ 7, 2020 ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೋವಿಡ್ ಸೋಂಕು ದೃಢಪಟ್ಟಿತ್ತು. ಜೂನ್ 18 ರಂದು ಅವರು ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಲಾಲ್ ಸಿಂಗ್ 1984ರಲ್ಲಿ ಸಾರಿಗೆ ಸೇವೆಗೆ ಕ್ಲೀನರ್ ಆಗಿ ಸೇರಿಕೊಂಡಿದ್ದು, ಬಳಿಕ 2002ರಲ್ಲಿ ಚಾಲಕರಾಗಿ ಬಡ್ತಿ ಪಡೆದಿದ್ದರು.
ಗೌರವ ಸಲ್ಲಿಸುವ ಮಾರ್ಗ: "ಮಾನವೀಯತೆ ಮತ್ತು ಸಮಾಜವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೋವಿಡ್ ಯೋಧರ ಕುಟುಂಬಗಳೊಂದಿಗೆ ದೆಹಲಿ ಸರ್ಕಾರ ಯಾವಾಗಲೂ ನಿಲ್ಲುತ್ತದೆ" ಎಂದು ಗಹ್ಲೋಟ್ ಹೇಳಿದರು. "ಪ್ರೀತಿ ಪಾತ್ರರ ನಷ್ಟವನ್ನು ಯಾವುದೇ ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ಆದರೆ ಈ ಪರಿಹಾರ ದೆಹಲಿ ಸರ್ಕಾರ ಕೋವಿಡ್ ಯೋಧರು ಮಾಡಿದ ತ್ಯಾಗಕ್ಕೆ ಗೌರವ ಸಲ್ಲಿಸುವ ಮಾರ್ಗವಾಗಿದೆ" ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಮೆಚ್ಚುಗೆ: ಮಹಾಮಾರಿ ಕೋವಿಡ್ ಅನ್ನು ಭಾರತ ನಿರ್ವಹಿಸಿದ ರೀತಿ ಜಗತ್ತಿನ ಯಾವುದೇ ದೇಶವೂ ನಿರ್ವಹಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಮಾರಕ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ನೀಡುವ ಯೋಜನೆಯೂ ಕೋರ್ಟ್ ಪ್ರಶಂಸೆಗೆ ಕಾರಣವಾಗಿದೆ. "ಕೋವಿಡ್‌ನಿಂದ ಸಾವನ್ನಪ್ಪಿ, ತೊಂದರೆಗೊಳಗಾಗಿರುವ ಅನೇಕ ಕುಟುಂಬಗಳಿಗೆ ಇದೀಗ ಸ್ವಲ್ಪಮಟ್ಟದ ಪರಿಹಾರ ಸಿಗುತ್ತಿದೆ. ಈ ಬಗ್ಗೆ ನಮಗೆ ಖುಷಿ ಇದೆ" ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಎ.ಎಸ್.ಬೋಪಣ್ಣ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದ್ದರು. ಕೋಟ್ಯಂತರ ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್ ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ಅನೇಕ ರೀತಿಯ ಪ್ರತಿಕೂಲ ಸನ್ನಿವೇಶ ಎದುರಿಸಿದ್ದೇವೆ. ಆದರೆ ಭಾರತ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿರುವ ಸರ್ವೋಚ್ಛ ನ್ಯಾಯಾಲಯ, ಈ ರೀತಿಯ ಕೆಲಸ ಬೇರಾವುದೇ ದೇಶದಿಂದಲೂ ಆಗಿಲ್ಲ ಎಂದಿದೆ.
ಇದನ್ನೂ ಓದಿ: ಭಾರತದ ರೀತಿ ಜಗತ್ತಿನ ಬೇರಾವುದೇ ದೇಶ ಕೋವಿಡ್ ನಿರ್ವಹಿಸಿಲ್ಲ: ಸುಪ್ರೀಂಕೋರ್ಟ್ ಮೆಚ್ಚುಗೆ
50 ಸಾವಿರ ರೂ.ಪರಿಹಾರ: ಕೊರೊನಾ ವೈರಸ್ನಿಂದ ದೇಶದಲ್ಲಿ ಸಾವನ್ನಪ್ಪಿರುವ ಪ್ರತಿಯೊಬ್ಬರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರವನ್ನು ರಾಜ್ಯ ಸರ್ಕಾರಗಳು ನೀಡಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತ್ತು. ಈಗಾಗಲೇ ಸಂಭವಿಸಿರುವ ಸಾವುಗಳಿಗೆ ಮಾತ್ರವಲ್ಲದೇ ಭವಿಷ್ಯದಲ್ಲಿ ಸಂಭವಿಸುವ ಸಾವುಗಳಿಗೂ ಪರಿಹಾರ ನೀಡಲಾಗುವುದು ಎಂದು ಸರ್ವೋನ್ನತ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಣ ರಾಜ್ಯ ಸರ್ಕಾರದಿಂದಲೇ ಪಾವತಿಯಾಗಲಿದೆ. ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಯಿಂದ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತಗಳ ಮೂಲಕ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
₹1 ಲಕ್ಷ ಪರಿಹಾರ ಘೋಷಿಸಿದ್ದ ಕರ್ನಾಟಕ: ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತಪಟ್ಟಿದ್ದರೆ, ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರವೂ ಆದೇಶಿಸಿತ್ತು.
ಇದನ್ನೂ ಓದಿ: ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ : ಸುಪ್ರೀಂಕೋರ್ಟ್ಗೆ ಕೇಂದ್ರದ ಮಾಹಿತಿ