ರಾಂಚಿ( ಜಾರ್ಖಂಡ್): ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ವಿರುದ್ಧದ ಲೋಕಪಾಲ್ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ಆದಾಯ ಮೀರಿದ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಪಾಲ ಸೋಮವಾರ ವಿಚಾರಣೆ ನಡೆಸಬೇಕಿತ್ತು.
ಜೆಎಂಎಂ ಮುಖ್ಯಸ್ಥ ಹಾಗೂ ರಾಜ್ಯಸಭಾ ಸಂಸದ ಶಿಬು ಸೊರೆನ್ ವಿರುದ್ಧ ಲೋಕಪಾಲ್ ಆಫ್ ಇಂಡಿಯಾ ಕೈಗೊಂಡಿರುವ ಕ್ರಮಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಜಸ್ವಂತ್ ವರ್ಮಾ ಸೋಮವಾರ ನೀಡಿರುವ ಆದೇಶದಲ್ಲಿ, ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ 2013 ರ ಅಡಿ ಭಾರತದ ಲೋಕಪಾಲ್ ತೆಗೆದುಕೊಳ್ಳುತ್ತಿರುವ ಕ್ರಮವನ್ನು ತಡೆ ಹಿಡಿದಿದ್ದಾರೆ. ಶಿಬು ಸೊರೆನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಲೋಕಪಾಲರ ಕ್ರಮವನ್ನು ಕಾನೂನುಬದ್ಧವಾಗಿ ತಪ್ಪು ಮತ್ತು ನ್ಯಾಯವ್ಯಾಪ್ತಿಯ ಉಲ್ಲಂಘನೆ ಎಂದು ಹೇಳಲಾಗಿದೆ.
ಕೋರ್ಟ್ ಪ್ರಕರಣಕ್ಕೆ ತಡೆ ನೀಡಿದ್ದು ಏಕೆ?: 5 ಆಗಸ್ಟ್ 2020 ರಂದು, ಬಿಜೆಪಿ ನಾಯಕ ನಿಶಿಕಾಂತ್ ದುಬೆ ಅವರ ದೂರಿನ ಮೇರೆಗೆ JMM ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಇದಾದ ನಂತರ ಸಿಬಿಐ ಈ ಪ್ರಕರಣದ ಪ್ರಾಥಮಿಕ ಕ್ರಮಕ್ಕಾಗಿ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ 2013ರ ಸೆಕ್ಷನ್ 20(1)(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಶಿಬು ಸೊರೇನ್ ತಮ್ಮ ವಿರುದ್ಧ ನೀಡಿರುವ ದೂರು ಸಂಪೂರ್ಣ ಸುಳ್ಳು ಎಂದು ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ಅಲ್ಲದೇ, ಭಾರತದ ಲೋಕಪಾಲ್‌ನಿಂದ ಮಾಡಲಾಗುವ ವಿಚಾರಣೆಯ ಸಂದರ್ಭದಲ್ಲಿ, ಲೋಕಪಾಲ ಕಾಯಿದೆಯ ಸೆಕ್ಷನ್ 53 ರ ಅಡಿ ಅಪರಾಧದ 7 ವರ್ಷಗಳ ನಂತರ ಮಾಡಿದ ಯಾವುದೇ ದೂರನ್ನು ತನಿಖೆ ಮಾಡಲು ಬರುವುದಿಲ್ಲ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತರಲಾಯಿತು.
ದೂರಿನ ದಿನಾಂಕದಿಂದ ಪ್ರಾಥಮಿಕ ವಿಚಾರಣೆಯನ್ನು ಪೂರ್ಣಗೊಳಿಸಲು ಗರಿಷ್ಠ 180 ದಿನಗಳ ಅವಧಿಯು ಫೆಬ್ರವರಿ 1, 2021 ರಂದು ಮುಕ್ತಾಯಗೊಂಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಇದುವರೆಗೆ ಸೋರೆನ್ ಅವರಿಂದ ಹೇಳಿಕೆಗಳನ್ನು ಮಾತ್ರ ಪಡೆಯಲಾಗಿದೆ. ಅಂದರೆ ನಿಗದಿತ ಶಾಸನಬದ್ಧ ಅವಧಿಯ ನಂತರ ಪ್ರಾಥಮಿಕ ತನಿಖಾ ವರದಿ ಸಲ್ಲಿಸಲಾಗಿದೆ.
ಇದು ಮಾನ್ಯತೆಯ ಅವಧಿಯ ಸುಮಾರು ಒಂದೂವರೆ ವರ್ಷಗಳ ನಂತರ ವರದಿ ಸಲ್ಲಿಕೆ ಮಾಡಲಾಗಿದೆ. ಹಾಗಾಗಿ, ಆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಲೋಕಪಾಲ್ ಅಧಿಕಾರ ವ್ಯಾಪ್ತಿಯ ಬಗ್ಗೆ ಯಾವುದೇ ಉತ್ತರ ಬಂದಿಲ್ಲ, ಆದ್ದರಿಂದ ಮುಂದಿನ ವಿಚಾರಣೆಯವರೆಗೆ ವಿಚಾರಣೆಯನ್ನು ತಡೆಹಿಡಿಯಲಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಪಟ್ಟಿ ಮಾಡಿದೆ.
ಇದನ್ನು ಓದಿ:ಕೋಟ್ಯಂತರ ರೂಪಾಯಿ ಹಗರಣ: ಚರ್ಚ್ ಆಫ್ ನಾರ್ತ್ ಬಿಷಪ್ ಬಂಧನ