ನವದೆಹಲಿ: ಸ್ವಂತ ತಂದೆ ತನ್ನ ಮಗುವನ್ನು ತೊರೆದಿದ್ದರೆ, ಮಗುವಿನ ಪಾಸ್‌ಪೋರ್ಟ್‌ನಿಂದ ಅವರ ಹೆಸರನ್ನು ತೆಗೆದುಹಾಕಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಒಂಟಿ ತಾಯಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಏ.19 ರಂದು ದೆಹಲಿ ಹೈಕೋರ್ಟ್‌ನಲ್ಲಿ ಮಹಿಳೆಯೊಬ್ಬರು ಅಪ್ರಾಪ್ತ ಮಗನ ಪಾಸ್‌ಪೋರ್ಟ್‌ನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತಾನು ಒಂಟಿ ಪೋಷಕರು ಮತ್ತು ತಂದೆ ಮಗುವನ್ನು ಹುಟ್ಟುವ ಮೊದಲು ಸಂಪೂರ್ಣವಾಗಿ ತ್ಯಜಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಸೂಚನೆ: ವಿಚ್ಛೇದನ ಒಪ್ಪಂದದ ಪ್ರಕಾರ ವ್ಯಕ್ತಿಗೆ ಯಾವುದೇ ಭೇಟಿಯ ಹಕ್ಕುಗಳಿಲ್ಲ ಮತ್ತು ಅವರು ಅಪ್ರಾಪ್ತ ವಯಸ್ಕ ಮಕ್ಕಳಿಗೆ ಯಾವುದೇ ಜೀವನಾಂಶ ಪಾವತಿಸುತ್ತಿಲ್ಲ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದರು. ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ "ಅಪ್ರಾಪ್ತ ಮಗನ ಪಾಸ್‌ಪೋರ್ಟ್‌ನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ" ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಅರ್ಜಿದಾರರು (ತಾಯಿ) ಮಗು ಹುಟ್ಟುವ ಮೊದಲು ತಂದೆ ತಮ್ಮ ಮಗುವನ್ನು ತೊರೆದಿದ್ದರು. ಬಳಿಕ ಅವರು ಮಗುವನ್ನು ಒಂಟಿಯಾಗಿ ಬೆಳೆಸಿರುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಇದು ತಂದೆ ಮಗುವನ್ನು ಸಂಪೂರ್ಣವಾಗಿ ತೊರೆದ ಪ್ರಕರಣವಾಗಿದೆ. ಅಂತಹ ಸಂದರ್ಭಗಳಲ್ಲಿ ಸೆಕ್ಷನ್ ಹಾಗೂ ಸಬ್ ಸೆಕ್ಷನ್ನ 8ರ ಷರತ್ತು 4.5.1 ಮತ್ತು ಸಬ್ ಸೆಕ್ಷನ್ 9ರ ಷರತ್ತು 4.1 ಸ್ಪಷ್ಟವಾಗಿ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಪಾಸ್‌ಪೋರ್ಟ್ ಕೈಪಿಡಿ ಮತ್ತು ಕಚೇರಿ ಮೆಮೊರಾಂಡಮ್ (ಒಎಂ) ಪ್ರಕಾರ ತಂದೆಯ ಹೆಸರಿಲ್ಲದೇ ವಿವಿಧ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ಗಳನ್ನು ನೀಡಬಹುದು ಎಂದು ನ್ಯಾ.ಪ್ರತಿಬಾ ಎಂ ಸಿಂಗ್ ಹೇಳಿದ್ದಾರೆ.
ಉಪನಾಮವನ್ನೂ ಬದಲಾಯಿಸಬಹುದು: ಈ ಪ್ರಕರಣ ವಿಶಿಷ್ಟ ಮತ್ತು ವಿಚಿತ್ರ ಸಂದರ್ಭಗಳಲ್ಲಿ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ಅಳಿಸಲು ಮತ್ತು ತಂದೆಯ ಹೆಸರಿಲ್ಲದೇ ಅಪ್ರಾಪ್ತ ಮಗುವಿನ ಪರವಾಗಿ ಪಾಸ್‌ಪೋರ್ಟ್ ಅನ್ನು ಮರು ನೀಡುವಂತೆ ನಿರ್ದೇಶಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಸ್ವಂತ ತಂದೆಯ ಹೆಸರನ್ನು ಅಳಿಸಬಹುದು ಮತ್ತು ಉಪನಾಮವನ್ನು ಸಹ ಬದಲಾಯಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಯಾವುದೇ ಕಠಿಣ ನಿಯಮ ಅನ್ವಯಿಸಲಾಗುವುದಿಲ್ಲ. ಪೋಷಕರ ನಡುವಿನ ವೈವಾಹಿಕ ಮನಸ್ತಾಪದ ಸಂದರ್ಭದಲ್ಲಿ ಮಗುವಿನ ಪಾಸ್‌ಪೋರ್ಟ್ ಅರ್ಜಿಯನ್ನು ಅಧಿಕಾರಿಗಳು ಪರಿಗಣಿಸಬೇಕಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವಾದವೇನು?: ಒಂಟಿ ತಾಯಿ ಮತ್ತು ಆಕೆಯ ಅಪ್ರಾಪ್ತ ಮಗ ತಂದೆಯ ಹೆಸರನ್ನು ತನ್ನ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ನಿಂದ ಅಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅರ್ಜಿದಾರರು ಅಪ್ರಾಪ್ತ ಮಗುವಿಗೆ ಹೊಸ ಪಾಸ್‌ಪೋರ್ಟ್ ಅನ್ನು ತಂದೆಯ ಹೆಸರು ನಮೂದಿಸದೇ ಮರು ನೀಡುವಂತೆ ಕೋರಿದ್ದರು. ನಾನು ಸಿಂಗಲ್ ಪೇರೆಂಟ್ ಆಗಿರುವುದರಿಂದ ಮತ್ತು ತಂದೆ ಮಗುವನ್ನು ಸಂಪೂರ್ಣವಾಗಿ ತ್ಯಜಿಸಿರುವುದರಿಂದ ಮಗುವಿನ ಪಾಸ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಂದೆಯ ಹೆಸರನ್ನು ನಮೂದಿಸುವಂತೆ ಒತ್ತಾಯಿಸಬಾರದು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ಬಿಗ್ ಬಿ ಮೊಮ್ಮಗಳು.. ಕಾರಣವೇನು ಗೊತ್ತಾ?