ನವದೆಹಲಿ: ಕುಸ್ತಿಪಟುಗಳು ಹೋರಾಟವನ್ನು ತೀವ್ರಗೊಳಿಸಿದ್ದು ಇಂದು ತಮ್ಮ ಪದಕವನ್ನು, ಗಂಗೆಯಲ್ಲಿ ಅರ್ಪಿಸಲು ಹೋಗಿದ್ದರು. ಈ ನಡುವೆ ಗಂಗಾ ಘಾಟ್ನ ಸಮಿತಿ ತಡೆಯೊಡ್ಡಿದ್ದ ಕಾರಣ, ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದ್ದಾರೆ. ಈ ನಡುವೆ ದೆಹಲಿ ಹೈಕೋರ್ಟ್ ಮಂಗಳವಾರ ತನ್ನ ರಿಜಿಸ್ಟ್ರಾರ್ ಜನರಲ್ ಮತ್ತು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗಾಗಿ ಅಪ್ರಾಪ್ತ ಕುಸ್ತಿಪಟುಗಳ ಅರ್ಜಿಯನ್ನು ಯಾವ ನ್ಯಾಯಾಲಯವು ಪರಿಗಣಿಸುತ್ತದೆ ಎಂದು ಕೇಳಲಾಗಿದೆ.
ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪ್ರಕರಣ ಸಧ್ಯ ವಿಚಾರಣೆಯಲ್ಲಿದೆ. ಆದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯ ವಿಚಾರಣೆ ಪಟಿಯಾಲ ಹೌಸ್ ಕೋರ್ಟ್ನಲ್ಲಿ ನಡೆಯುತ್ತಿದೆ. ಕುಸ್ತಿಪಟುಗಳು ಅಪರಾಧ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 156 (3) ರ ಅಡಿಯಲ್ಲಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ಇದರಲ್ಲಿ ಎರಡು ಪ್ರಕರಣಗಳಿದ್ದ ಕಾರಣ ಎರಡು ಕೋರ್ಟ್ಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಅಂದರೆ 18 ವರ್ಷ ಮೇಲ್ಪಟ್ಟವರ ಪ್ರಕರಣವನ್ನು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಮತ್ತು ಪೋಕ್ಸೊ ಪ್ರಕರಣ ಪಟಿಯಾಲ ಹೌಸ್ ಕೋರ್ಟ್ನಲ್ಲಿ ನಡೆಸಲಾಗುತ್ತಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜಿತ್ ಸಿಂಗ್ ಜಸ್ಪಾಲ್ ಅವರು ಕುಸ್ತಿಪಟುಗಳ ಅರ್ಜಿಯ ಮೇಲೆ ನೋಟಿಸ್ ಜಾರಿ ಮಾಡಿದರು. ಆದರೆ, ಅವರು ಇತರ ವಿಷಯವನ್ನು ಹೈಕೋರ್ಟ್‌ಗೆ ಕಳುಹಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಇಂದು ವಿಚಾರಣೆ ನಡೆಸಿದ್ದು, ರಿಜಿಸ್ಟ್ರಾರ್ ಜನರಲ್ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಜುಲೈ 6 ರೊಳಗೆ ಪ್ರತಿವಾದಿಗಳು ತಮ್ಮ ಉತ್ತರವನ್ನು ಸಲ್ಲಿಸುವಂತೆ ಅವರು ಆದೇಶಿಸಿದೆ.
ಕೇಸ್ ದಾಖಲಿಸುವಂತೆ ಸುಪ್ರೀಂ ಮೊರೆಹೋಗಿದ್ದ ಕುಸ್ತಿಪಟುಗಳು: ವರ್ಷಾರಂಭದಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಹೋರಾಟ ಮಾಡಿದ್ದ ಕುಸ್ತಿಪಟುಗಳು ಸಮಿತಿ ರಚನೆ ಆದ ನಂತರ ಪ್ರತಿಭಟನೆ ಹಿಂಪಡೆದಿದ್ದರು. ಸಮಿತಿ ವರದಿ ಸಲ್ಲಿಕೆ ನಂತರ ಯಾವುದೇ ಕ್ರಮ ಜರುಗಿಲ್ಲ ಎಂದು ಮತ್ತೆ ಹೋರಾಟ ಆರಂಭಿಸಿದ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸುಪ್ರೀಂ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್ ನೀಡಿದ ಆದೇಶದ ಮೇಲೆ ಡೆಲ್ಲಿ ಪೊಲೀಸರು ಶರಣ್ ಸಿಂಗ್ ವಿರುದ್ಧ ಎರಡು ಎಫ್ಐಆರ್ ದಾಖಲಿಸಿದ್ದರು. ಅದರಲ್ಲಿ ಒಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಆದರೆ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಆಗಿತ್ತು. ಎಫ್ಐಆರ್ ದಾಖಲಾದ ನಂತರ ಬಂಧನ ಮಾಡದ ಕಾರಣ ಬಂಧಿಸುವವರೆಗೂ ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ಕುಳಿತಿದ್ದರು. ಇವರಿಗೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು. ಭಾನುವಾರ ನೂತನ ಸಂಸತ್ ಕಡೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಆದರೆ ಜಂತರ್ ಮಂತರ್ನಲ್ಲಿ ಅವರಿಗೆ ಪತ್ರಿಭಟನೆ ಮಾಡದಂತೆ ಹೇಳಲಾಗದೆ.
ಇದನ್ನೂ ಓದಿ: ಒಲಂಪಿಕ್ ಪದಕಗಳನ್ನು ಗಂಗೆಗೆ ಎಸೆಯುತ್ತೇವೆ.. ಇಂಡಿಯಾ ಗೇಟ್ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಕುಸ್ತಿಪಟುಗಳ ಎಚ್ಚರಿಕೆ