ನವದೆಹಲಿ : ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ದೆಹಲಿಯ ವಾಹನ ಸವಾರರಿಗೆ ಗುಡ್ನ್ಯೂಸ್ ನೀಡಿದೆ. ಪೆಟ್ರೋಲ್ ಮೇಲಿನ ವ್ಯಾಟ್ನ ಶೇ. 30ರಿಂದ ಶೇ. 19.40ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 8 ರೂಪಾಯಿ ಇಳಿಕೆಯಾಗಲಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೊಳ್ಳಲಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿ ಆದೇಶಿಸಿತ್ತು.
ಹೀಗಾಗಿ, ಬಿಜೆಪಿ ಆಡಳಿತವಿರುವ ಕರ್ನಾಟಕ, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ತೈಲ ಬೆಲೆ ಮೇಲಿನ ವ್ಯಾಟ್ ಕಡಿಮೆ ಮಾಡಿದ್ದವು. ಇದೀಗ ದೆಹಲಿ ಕೇಜ್ರಿವಾಲ್ ಸರ್ಕಾರ ಕೂಡ ಈ ನಿರ್ಧಾರ ಕೈಗೊಂಡಿದೆ.
ದೆಹಲಿಯಲ್ಲಿ ಈವರೆಗೆ ಪೆಟ್ರೋಲ್ ಬೆಲೆ ಲೀಟರ್ಗೆ 103.97 ರೂ.ಇತ್ತು. ಇದೀಗ 8 ರೂಪಾಯಿ ಕಡಿತಗೊಂಡಿರುವ ಕಾರಣ 95.97ರೂ.ಗೆ ಇಳಿಕೆಯಾಗಿದೆ. ಈ ಮೂಲಕ ವಾಹನ ಸವಾರರು ಸ್ವಲ್ಪ ಮಟ್ಟದ ನಿಟ್ಟುಸಿರು ಬಿಡುವಂತೆ ಆಗಿದೆ.