ಡೆಹ್ರಾಡೂನ್(ಉತ್ತರಾಖಂಡ): ಸಹಜೀವನ ಪ್ರಕರಣಗಳು ಕೆಲವೊಂದು ದಾರುಣ ಅಂತ್ಯ ಕಂಡರೆ, ಇನ್ನೂ ಕೆಲವು ಆರೋಪಗಳಲ್ಲಿ ಕೊನೆಯಾಗುತ್ತವೆ. ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ದೆಹಲಿಯ ಶ್ರದ್ಧಾ ವಾಕರ್ 35 ತುಂಡುಗಳಾದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉತ್ತರಾಖಂಡದಲ್ಲಿ ಮದುವೆ ಮಾಡಿಕೊಳ್ಳುವ ನೆಪದಲ್ಲಿ ಯುವತಿಯನ್ನು ಮೂರು ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದಲ್ಲದೇ, ಮತಾಂತರಕ್ಕೆ ಪ್ರೇರೇಪಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ.
ಮೂರು ಬಾರಿ ಗರ್ಣಿಣಿ: ದೆಹಲಿ ನಿವಾಸಿಯಾಗಿರುವ ಯುವತಿ ಒಂದೂವರೆ ವರ್ಷಗಳಿಂದ ಆರೋಪಿ ನೌಶಾದ್ ಖುರೇಷಿ ಎಂಬಾತನ ಜತೆ ಸಹಜೀವನ ನಡೆಸುತ್ತಿದ್ದಳು. ಮದುವೆಯ ನೆಪದಲ್ಲಿ ನೌಶಾದ್ ಪದೇ ಪದೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಅವಧಿಯಲ್ಲಿ ತಾನು ಮೂರು ಬಾರಿ ಗರ್ಭವತಿಯಾಗಿದ್ದು, 2 ಬಾರಿ ಗರ್ಭಪಾತಕ್ಕೆ ಒಳಗಾಗಿದ್ದೇನೆ. ಇದೀಗ ಮೂರನೇ ಬಾರಿಯೂ ಗರ್ಭ ಧರಿಸಿದ್ದು, 3 ತಿಂಗಳು ಗರ್ಭಿಣಿಯಾಗಿದ್ದೇನೆ. ಆರೋಪಿ ನೌಷಾದ್ ಖುರೇಷಿ ಭ್ರೂಣವನ್ನು ತೆಗೆಸಲು ಒತ್ತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.
ಮತಾಂತರಕ್ಕೆ ಯತ್ನ: ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಲ್ಲದೇ ಗರ್ಭಿಣಿಯನ್ನಾಗಿ ಮಾಡಿ, ಇದೀಗ ಮತಾಂತರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಆರೋಪಿಯ ಸಹೋದರ ಶಾನವಾಜ್ ಹಾಗೂ ತಂದೆ ಜಹೀರ್ ಖುರೇಷಿ ಅವರನ್ನು ಸಂಪರ್ಕಿಸಿದಾಗ ಮತಾಂತರಗೊಳ್ಳಲು ಸೂಚಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ, ದೈಹಿಕವಾಗಿ ದುರ್ಬಳಕೆ, ಮತಾಂತರ ಕಲಂನಡಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಯುವಕನನ್ನು ಬಂಧಿಸಲಾಗಿದೆ. ಆತನ ಸಹೋದರ ಮತ್ತು ತಂದೆಯನ್ನು ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಲಿವ್ಇನ್ ಕಹಿ ಘಟನೆಗಳು: ಅನ್ಯಕೋಮಿನ ಯುವಕ ಅಫ್ತಾಬ್ ಪೂನಾವಾಲಾ ಹಿಂದು ಯುವತಿ ಶ್ರದ್ಧಾ ವಾಕರ್ಳನ್ನು ಕ್ರೂರವಾಗಿ ಕೊಂದಿದ್ದಕ್ಕಾಗಿ ಬಂಧಿಸಲಾಗಿದೆ. ಅಫ್ತಾಬ್ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರೀಜರ್ನಲ್ಲಿಟ್ಟಿದ್ದ. ಬಳಿಕ ದೇಹದ ಭಾಗಗಳನ್ನು ದೆಹಲಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದ. ಶ್ರದ್ಧಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದರಿಂದ ಹತ್ಯೆ ಬೆಳಕಿಗೆ ಬಂದಿತ್ತು. ಇದು ದೇಶದಲ್ಲೇ ಅತಿ ಭೀಕರ ಕೊಲೆಯಾಗಿ ಸುದ್ದಿಯಾಗಿತ್ತು.
ಇನ್ನೊಂದು ಪ್ರಕರಣ ಪೂರ್ವ ದೆಹಲಿಯ ಪಾಂಡವ್ ನಗರದಲ್ಲಿ ಬೆಳಕಿಗೆ ಬಂದಿತ್ತು. ಮಹಿಳೆಯೊಬ್ಬರು ಪುತ್ರನೊಂದಿಗೆ ಸೇರಿಕೊಂಡು ಪತಿಯನ್ನು ಕೊಂದು, ದೇಹವನ್ನು 22 ತುಂಡುಗಳಾಗಿ ಕತ್ತರಿಸಿದ್ದಳು. ಪತಿಯ ದೇಹವನ್ನು ತುಂಡುಗಳಾಗಿ ಮಾಡಿ ಮೊದಲು ಫ್ರಿಡ್ಜ್‌ನಲ್ಲಿ ಇಟ್ಟಿದ್ದರು. ಬಳಿಕ ಪೂರ್ವ ದೆಹಲಿಯ ವಿವಿಧ ಸ್ಥಳಗಳಲ್ಲಿ ಅವುಗಳನ್ನು ಬಿಸಾಡಿದ್ದರು. ದಾಸ್‌ಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಕೊಲೆ ಮಾಡಿದ್ದೆ ಎಂದು ಹಂತಕಿ ಪೂನಂ ಪೊಲೀಸರಿಗೆ ತಿಳಿಸಿದ್ದಳು.
ಸಹಜೀವನ ನಡೆಸಬೇಡಿ ಎಂದಿದ್ದ ಸಚಿವ : ಕೇಂದ್ರ ಮಂತ್ರಿ ಕೌಶಲ್ ಕಿಶೋರ್ ಚೌಧರಿ ಶ್ರದ್ಧಾ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿ, ಇಂದಿನ ಯುವಪೀಳಿಗೆ ಲಿವ್ ಇನ್ ರಿಲೇಷನ್ ಶಿಪ್ನಲ್ಲಿ ಇರುವುದನ್ನು ಬಿಡಬೇಕು ಎಂದು ಸಲಹೆ ನೀಡಿದ್ದರು. ಸುಶಿಕ್ಷಿತ ಯುವತಿಯರು ಲಿವ್ ಇನ್ ರಿಲೇಷನ್ ಶಿಪ್ ಸಂಬಂಧಕ್ಕಾಗಿ ತಂದೆ ತಾಯಿಯನ್ನು ತೊರೆಯುತ್ತಾರೆ. ಇದರಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ. ಯಾರೂ ಲಿವ್ ಇನ್ ರಿಲೇಷನ್ ಇಟ್ಟುಕೊಳ್ಳಬಾರದು. ಒಂದು ವೇಳೆ ಬೇಕಾದಲ್ಲಿ ಅವರು ಕೋರ್ಟ್ನಿಂದ ದಾಖಲೆ ಮಾಡಿಸಬೇಕು. ಪ್ರೀತಿಸುವ ಯುವಕ ಬೇಕೇಬೇಕು ಎಂದಾದಲ್ಲಿ ಅವನೊಂದಿಗೆ ಮದುವೆ ಮಾಡಿಕೊಳ್ಳಿ ಎಂದೆಲ್ಲಾ ಸಲಹೆ ನೀಡಿದ್ದರು.
ಓದಿ: ದಿ. ನಟ ಸುಶಾಂತ್ ಸಿಂಗ್ ರಜ್ಪೂತ್ ಜನ್ಮದಿನಕ್ಕೆ ಶುಭ ಕೋರಿದ ರಿಯಾ ಚಕ್ರವರ್ತಿ