ನವದೆಹಲಿ: ರಾಷ್ಟ್ರ ರಾಜಧಾನಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯಿರುವ ಕಟ್ಟಡವೊಂದರಲ್ಲಿ ಶುಕ್ರವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 27 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ನಿನ್ನೆ ರಾತ್ರಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದಾರೆ.
ದುರಂತ ಸಂಭವಿಸಿದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸುಮಾರು 60-70 ಜನರನ್ನು ಬಚಾವ್ ಮಾಡಲಾಗಿದೆ. ಇನ್ನೂ ಕೆಲವರು ಒಳಗೆ ಸಿಲುಕಿಕೊಂಡಿರುವ ಶಂಕೆ ಇದೆ. ಮೃತರ ವಿವರ, ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿಯನ್ನು ಹೊಂದಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಂಪನಿಯ ಮಾಲೀಕರಾದ ಹರೀಶ್ ಗೋಯೆಲ್ ಮತ್ತು ವರುಣ್ ಗೋಯೆಲ್ ಅವರನ್ನು ಬಂಧಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದಾರೆ. ಈ ಕಟ್ಟಡದ ಮಾಲೀಕರನ್ನು ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ. ಆದಷ್ಟು ಬೇಗ ಕಟ್ಟಡದ ಮಾಲೀಕನನ್ನು ಬಂಧಿಸಲಾಗುವುದು ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ರಾಜಕಾರಣಿಗಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ.
ಓದಿ: Delhi fire tragedy: ಮೃತರ ಸಂಖ್ಯೆ 27ಕ್ಕೆ ಏರಿಕೆ, 12 ಮಂದಿ ಗಾಯ.. ಪಾರಾದವರು ಬಿಚ್ಚಿಟ್ಟರು ಕರಾಳತೆ
ದುರಂತದ ಬಗ್ಗೆ ಮನನೊಂದಿದ ಪ್ರಧಾನಿ ಮೋದಿ, ದೆಹಲಿ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದಕ್ಕೆ ಅತೀವ ಬೇಸರ ತಂದಿದೆ. ದುಃಖಿತ ಕುಟುಂಬಗಳ ಜೊತೆ ನಾವಿದ್ದೇವೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಮೋದಿ ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿಯನ್ನು ಹೊಂದಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಪ ಪೊಲೀಸ್ ಆಯುಕ್ತ (ಹೊರ) ಸಮೀರ್ ಶರ್ಮಾ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಕಟ್ಟಡಕ್ಕೆ ಬೆಂಕಿ ತಗುಲಿದೆ. ಕಟ್ಟಡದಲ್ಲಿ ಬೆಂಕಿ ತಗುಲಿರುವ ಬಗ್ಗೆ ಸಂಜೆ 4.45ಕ್ಕೆ ಕರೆ ಬಂದಿದ್ದು, ತಕ್ಷಣವೇ ಸ್ಥಳಕ್ಕೆ ದೌಡಾಯಿಸಲಾಗಿದೆ. ಎರಡು ಮಹಡಿಯಲ್ಲಿ ಬೆಂಕಿ ಆವರಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡೆವು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡದೊಳಗೆ ಸುಗಂಧ ದ್ರವ್ಯ ಮತ್ತು ಮಸಾಲೆ ಪದಾರ್ಥ ಇರುವುದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಪ್ರಾಣ ಉಳಿಸಿಕೊಳ್ಳಲು ಕೆಲವರು ಕಟ್ಟಡದಿಂದ ಕೆಳಗೆ ಜಿಗಿದಿದ್ದಾರೆ. ಇಲ್ಲಿ ಹೆಚ್ಚಾಗಿ ವಿವಿಧ ಅಂಗಡಿಗಳಿದ್ದವು ಎನ್ನಲಾಗ್ತಿದೆ. ಘಟನಾ ಸ್ಥಳದಲ್ಲಿ ಸುಮಾರು 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.