ನವದೆಹಲಿ: ಸತತ ಮೂರು ವಾರಗಳವರೆಗೆ ರಾಷ್ಟ್ರ ರಾಜಧಾನಿಯನ್ನು ಲಾಕ್‌ಡೌನ್ ಮಾಡಿದ ಪರಿಣಾಮ ಏ.19ರ ಬಳಿಕ ದೆಹಲಿಯ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಶೇ 35ರಿಂದ ಶೇ.21.67ಕ್ಕೆ ಇಳಿಕೆ ಕಂಡಿದೆ.
ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,336 ಕೇಸ್ಗಳು ಪತ್ತೆಯಾಗಿವೆ. ಮೃತರ ಸಂಖ್ಯೆ ಕೂಡ 300ರ ಗಡಿಯಿಂದ ಕೆಳಗಿಳಿದಿದ್ದು, ನಿನ್ನೆ 273 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ದೆಹಲಿಯಲ್ಲಿ ಮರಣ ಪ್ರಮಾಣ ಶೇಕಡಾ 1.46 ರಷ್ಟಿದೆ. ಈವರೆಗೆ ಒಟ್ಟು 13,23,567 ಸೋಂಕಿತರು ಪತ್ತೆಯಾಗಿದ್ದು, 19,344 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.
ಹೆಚ್ಚಿನ ಓದಿಗೆ: ದೆಹಲಿಯಲ್ಲಿ ಕುಸಿದ ಸೋಂಕು ಪ್ರಸರಣ ಪ್ರಮಾಣ: ಮತ್ತೆ ಒಂದು ವಾರ ಲಾಕ್‌ಡೌನ್ ವಿಸ್ತರಣೆ
ಕೊರೊನಾ ಸಾವು-ನೋವು ಕಡಿಮೆಯಾಗುತ್ತಿದ್ದರೂ ಕೂಡ ಮತ್ತಷ್ಟು ಪರಿಸ್ಥಿತಿ ನಿಯಂತ್ರಣಕ್ಕೆ ಸಲುವಾಗಿ ಹಾಗೂ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ಮತ್ತೆ ಒಂದು ವಾರದ ಕಾಲ ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ದೆಹಲಿ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಿವಾಹ ಸಮಾರಂಭಗಳನ್ನು ನಿಷೇಧಿಸಲಾಗಿದೆ.