ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ನವೀಕರಣಕ್ಕೆ ದುಬಾರಿ ಮತ್ತು ಅಕ್ರಮವಾಗಿ 44 ಕೋಟಿ ಖರ್ಚು ಮಾಡಲಾಗಿದೆ ಎಂಬ ಆರೋಪದ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ತನಿಖೆ ಆರಂಭಿಸಿದೆ. ಈಚೆಗಷ್ಟೇ ಕೇಂದ್ರ ಸರ್ಕಾರ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ವಹಿಸಿತ್ತು. ಇದರ ಬೆನ್ನಲ್ಲೇ ತನಿಖಾ ದಳ ತನ್ನ ಪ್ರಾಥಮಿಕ ಕಾರ್ಯ ಶುರು ಮಾಡಿದೆ.
ಸಿಎಂ ಕೇಜ್ರಿವಾಲ್ ಅವರ ಹಳೆಯ ನಿವಾಸವನ್ನು ಅತಿ ದುಬಾರಿ ವಸ್ತುಗಳಿಂದ ನವೀಕರಿಸಲಾಗಿದೆ. ಸರ್ಕಾರದ ಹಣದಲ್ಲಿ ಅದನ್ನು ಅಕ್ರಮವಾಗಿ ಕಟ್ಟಿಸಲಾಗಿದೆ ಎಂದು ಕಾಂಗ್ರೆಸ್, ಬಿಜೆಪಿ ಆರೋಪಿಸಿದ್ದವು. ಇದು ಆಪ್ ಸಿಎಂ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನಿವಾಸ ನವೀಕರಣಕ್ಕೆ ಕರೆಯಲಾದ ಟೆಂಡರ್ ದಾಖಲೆಗಳು, ಮಾರ್ಬಲ್ ಫ್ಲೋರಿಂಗ್ ವಿವರಗಳು, ಮಾಡ್ಯುಲರ್ ಕಿಚನ್ ಕಾಮಗಾರಿಗಳು, ಗುತ್ತಿಗೆದಾರರು ಸಲ್ಲಿಸಿದ ಬಿಡ್‌ಗಳು ಮತ್ತು ಕಟ್ಟಡದ ನಕ್ಷೆಯ ಅನುಮೋದನೆಯ ದಾಖಲೆಗಳನ್ನು ನೀಡುವಂತೆ ದೆಹಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವುಗಳ ಜತೆಗೆ ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್ಗಳ ದಾಖಲೆಯನ್ನು ಅಕ್ಟೋಬರ್ 3ರ ಒಳಗೆ ನೀಡಲು ಆದೇಶಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಬರೆದಿದ್ದ 5 ಪುಟಗಳ ಪತ್ರದ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಆರೋಪವೇನು?: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 44 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಮನೆಗೆ ಖರೀದಿಸಿದ 8 ಕರ್ಟೈನ್‌ಗಳ ಬೆಲೆ ಕನಿಷ್ಠ 3.57 ಲಕ್ಷ ರೂಪಾಯಿಯಿಂದ 7.94 ಲಕ್ಷ ರೂಪಾಯಿ ಇದೆ. ಅಲ್ಲದೇ ವಿಯೆಟ್ನಾಂನಿಂದ 1.15 ಕೋಟಿ ರು. ಬೆಲೆಯ ಅಮೃತಶಿಲೆ ತರಲಾಗಿದೆ. ಇದರ ಜೊತೆಗೆ ದುಬಾರಿ ಬೆಲೆಯ ವಸ್ತುಗಳನ್ನೂ ಮನೆಯಲ್ಲಿ ಅಳವಡಿಸಲಾಗಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಗಂಭೀರ ಆರೋಪ ಮಾಡಿವೆ.
ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಆಪ್, 80 ವರ್ಷಗಳಷ್ಟು ಹಳೆಯ ಮನೆ ಅಲ್ಲಲ್ಲಿ ಪತನಗೊಳ್ಳುತ್ತಿದ್ದ ಕಾರಣ ಕೇಂದ್ರ ಲೋಕೋಪಯೋಗಿ ಸಚಿವಾಲಯದ ಶಿಫಾರಸಿನ ಅನ್ವಯ ನವೀಕರಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಆಮ್ ಆದ್ಮಿ ಪಕ್ಷದ ಹೇಳಿಕೆಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿದಾಳಿ ನಡೆಸಿವೆ. ಅಧಿಕಾರಕ್ಕೆ ಬಂದ ನಂತರ ಸಾಮಾನ್ಯರಂತೆ ಸಾಮಾನ್ಯ ಮನೆಯಲ್ಲಿ ಬದುಕುತ್ತೇನೆ ಎಂದಿದ್ದ ಕೇಜ್ರಿವಾಲ್ ಆ ಮಾತುಗಳನ್ನು ಮರೆತಿದ್ದಾರೆ. ಅವರ ನಿವಾಸಕ್ಕೆ ಅನಗತ್ಯವಾಗಿ ದುಬಾರಿ ಖರ್ಚು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರಿ: ಸ್ಮಾರ್ಟ್ ಸಿಟಿ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು