ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ ಭದ್ರತೆ ಕಡಿಮೆ ಮಾಡಲಾಗಿದೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಈ ಆರೋಪವನ್ನು ಕೇಂದ್ರ ಗೃಹ ಸಚಿವಾಲಯ ತಳ್ಳಿಹಾಕಿದೆ.
ಕೇಜ್ರಿವಾಲ್ ಅವರನ್ನು ರಕ್ಷಿಸುವ ಪೊಲೀಸ್ ಕಮಾಂಡೋಗಳ ಸಂಖ್ಯೆಯನ್ನು ಈಗ ಆರರಿಂದ ಎರಡಕ್ಕೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ನಾಗರಿಕ ಚುನಾವಣಾ ಫಲಿತಾಂಶದ ನಂತರ ಈ ಭದ್ರತೆ ಕಡಿಮೆಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಗುಜರಾತ್ ನಾಗರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅದ್ಭುತ ಗೆಲುವು ಕಂಡ ಎರಡು ದಿನಗಳ ನಂತರ ಬಿಜೆಪಿ ನಾಯಕತ್ವದ ಆಜ್ಞೆಯ ಮೇರೆಗೆ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಲಾಗಿದೆ. ಆದರೆ, ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಎಎಪಿ 27 ಸ್ಥಾನಗಳನ್ನು ಗೆದ್ದಿದ್ದು, ಶುಕ್ರವಾರ ಪಕ್ಷದ ಕನ್ವೀನರ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.