ಅಹಮದಾಬಾದ್(ಗುಜರಾತ್): ಮೋದಿ ತವರು ರಾಜ್ಯ ಗುಜರಾತ್ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಆಟೋ ಚಾಲಕನ ಮನೆಯಲ್ಲಿ ಊಟ ಮಾಡುವ ಮೂಲಕ ಗಮನ ಸೆಳೆದಿದ್ದು, ಜನಸಾಮಾನ್ಯರ ಹೃದಯ ಗೆದ್ದಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಆಟೋರಿಕ್ಷಾ ಚಾಲಕನ ಆಹ್ವಾನದ ಮೇರೆಗೆ ಆಟೋದಲ್ಲೇ ಅವರ ಮನೆಗೆ ತೆರಳಿ ಭೋಜನ ಸವಿದಿದ್ದಾರೆ. ಈ ವೇಳೆ ಪ್ರೋಟೋಕಾಲ್ ವಿಚಾರವಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವ ಘಟನೆ ಸಹ ನಡೆದಿದೆ.
ಮುಂದಿನ ಮೂರು ತಿಂಗಳಲ್ಲಿ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಈ ಹಿಂದಿನಿಂದಲೂ ಭರ್ಜರಿ ತಯಾರಿ ನಡೆಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲಿಂದ ಮೇಲೆ ಗುಜರಾತ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸದ್ಯ ಎರಡು ದಿನದ ಪ್ರವಾಸದಲ್ಲಿರುವ ಕೇಜ್ರಿವಾಲ್, ನಿನ್ನೆ ಮಧ್ಯಾಹ್ನ ಆಟೋರಿಕ್ಷಾ ಚಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಆಟೋ ಚಾಲಕ ವಿಕ್ರಂ ದಾಂತಾನಿ ಎಂಬುವರು ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಜ್ರಿವಾಲ್ ರಾತ್ರಿ 8 ಗಂಟೆಗೆ ಬರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ: ಕೇಜ್ರಿವಾಲ್ ಆಫರ್
ತಾವು ಉಳಿದುಕೊಂಡಿರುವ ಹೋಟೆಲ್ಗೆ ಬಂದು ಆಟೋದಲ್ಲೇ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅದರಂತೆ ಆಟೋದಲ್ಲಿ ಚಾಲಕನ ಮನೆಗೆ ತೆರಳಿ ಊಟ ಮಾಡಿದ್ದಾರೆ. ಹೋಟೆಲ್ನಿಂದ ಆಟೋದಲ್ಲಿ ಹೋಗದಂತೆ ಪೊಲೀಸರು ತಡೆವೊಡ್ಡಿದ್ದಾರೆ. ಹೀಗಾಗಿ, ಕೆಲ ನಿಮಿಷ ವಾಗ್ವಾದ ನಡೆಯಿತು. ತದನಂತರ ಆಟೋದಲ್ಲಿ ತೆರಳಲು ಅವಕಾಶ ನೀಡಲಾಗಿದೆ. ಈ ವಿಚಾರವನ್ನಿಟ್ಟುಕೊಂಡು ಬಿಜೆಪಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಸಹ ನಡೆಸಿದೆ.
ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಿರುದ್ಯೋಗಿ ಯುವಕನಿಗೂ ಮಾಸಿಕ 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಹಾಗೂ ಪ್ರತಿಯೊಬ್ಬರಿಗೂ ಉದ್ಯೋಗ ನೀಡಲಾಗುವುದು ಎಂದು ಈಗಾಗಲೇ ಕೇಜ್ರಿವಾಲ್ ಭರ್ಜರಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಉಚಿತ ಶಿಕ್ಷಣ, ಆರೋಗ್ಯ ಭಾಗ್ಯದ ಘೋಷಣೆ ಸಹ ಮಾಡಿದ್ದಾರೆ.