ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿ ಭಾರಿ ಪ್ರವಾಹ ಉಂಟುಮಾಡಿದೆ. ನದಿದಡದಲ್ಲಿ ವಾಸಿಸುವ ಅನೇಕ ಬಡ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕೆಲವು ಕುಟುಂಬಗಳ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ, ಪ್ರವಾಹಪೀಡಿತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಶಾಲೆಗಳಿಗೆ ರಜೆ: ಈ ಕುರಿತು ಟ್ವೀಟ್ ಮಾಡಿರುವ ಅವರು, "ನಾನು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆಲವು ಮನೆಗಳ ಸಂಪೂರ್ಣ ಸಾಮಗ್ರಿ ಕೊಚ್ಚಿಹೋಗಿವೆ. ಹಲವೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಲು ಸರ್ಕಾರ ಬದ್ಧ. ಪ್ರವಾಹಪೀಡಿತ ಕುಟುಂಬಕ್ಕೆ ತಲಾ ಹತ್ತು ಸಾವಿರ ರೂ. ಗಳ ಪರಿಹಾರಧನ ನೀಡಲಾಗುವುದು. ಆಧಾರ್ ಕಾರ್ಡ್‌ನಂತಹ ಪ್ರಮುಖ ಕಾಗದ ಪತ್ರಗಳ ದಾಖಲೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಅವರಿಗಾಗಿ ಶಿಬಿರ ಏರ್ಪಡಿಸಲಾಗುವುದು. ಹಾಗೆಯೇ, ಬಟ್ಟೆ ಮತ್ತು ಪುಸ್ತಕಗಳು ಕೊಚ್ಚಿಹೋದ ಮಕ್ಕಳಿಗೆ ಶಾಲೆಗಳ ಪರವಾಗಿ ನೀಡಲಾಗುವುದು. ಪ್ರವಾಹಪೀಡಿತ ಪ್ರದೇಶಗಳಲ್ಲಿರುವ ಎಂಸಿಡಿ ಶಾಲೆಗಳನ್ನು ಜುಲೈ 17 ಮತ್ತು 18 ರಂದು ಮುಚ್ಚುವಂತೆ ಎಂಸಿಡಿ ಸೂಚನೆ ನೀಡಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಯಮುನಾ ನದಿ ಪ್ರವಾಹಕ್ಕೆ ಕುಸಿದು ಬಿದ್ದ ಮೂರು ಅಂತಸ್ತಿನ ಮನೆ.. ವಿಡಿಯೋ
ನೆರೆಯ ಹರಿಯಾಣದಿಂದ ನೀರು ಬಿಡುಗಡೆಯಾದ ಬಳಿಕ ಅಪಾಯದ ಅಂಚಿನಲ್ಲಿ ಹರಿಯುತ್ತಿದ್ದ ಯಮುನೆಯ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದ್ದರೂ ಸಹ ನಗರದ ಹಲವಾರು ಪ್ರದೇಶಗಳು ಇನ್ನೂ ಜಲಾವೃತವಾಗಿವೆ. ಇನ್ನೊಂದೆಡೆ, ಪರಿಹಾರ ಶಿಬಿರಗಳಲ್ಲಿ ಅಸಮರ್ಪಕ ಸೌಲಭ್ಯಗಳ ಕುರಿತು ದೂರುಗಳು ಕೇಳಿ ಬಂದಿವೆ. ನೀರಿನ ಕೊರತೆ, ಅಸಮರ್ಪಕ ಶೌಚಾಲಯಗಳು, ವಿದ್ಯುತ್ ಮತ್ತು ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ಶಿಬಿರಗಳಲ್ಲಿರುವ ಸಂತ್ರಸ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ : ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ : ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ
ಯಮುನಾ ನದಿ ನೀರಿನ ಮಟ್ಟ : ಕೇಂದ್ರ ಜಲ ಆಯೋಗವು ತಮ್ಮ ಪೋರ್ಟಲ್‌ನಲ್ಲಿ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಯಮುನಾ ನದಿಯ ನೀರಿನ ಮಟ್ಟವು ಭಾನುವಾರ ಮಧ್ಯಾಹ್ನ 12 ಗಂಟೆಗೆ 205.88 ಮೀಟರ್‌ಗೆ ಇಳಿದಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮುಂದಿನ ಕೆಲವು ಗಂಟೆಗಳಲ್ಲಿ ಅಪಾಯದ ಮಟ್ಟಕ್ಕಿಂತ ನೀರು ಕೆಳಗಿಳಿಯುವ ಸಾಧ್ಯತೆ ಇದೆ ಎಂದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟವು 205.58 ಮೀಟರ್‌ಗೆ ದಾಖಲಾಗಿದೆ. ಬೆಳಗ್ಗೆ 8 ಗಂಟೆಗೆ ದಾಖಲಾದ 205.50 ಮೀಟರ್ಗೊಂತ ಸ್ವಲ್ಪ ಹೆಚ್ಚಳವಾಗಿದೆ.
ಇದನ್ನೂ ಓದಿ : Delhi Flood : ತಗ್ಗದ ಯಮುನಾ ನದಿ ಪ್ರವಾಹ... ದೆಹಲಿ ಜಲಾವೃತ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಮೇಲೆ ವಿಷಕಾರಿ ಹಾವುಗಳು ಪ್ರತ್ಯಕ್ಷ.. ಜನರಿಗೆ ಆತಂಕ