ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯೊಂದರಲ್ಲಿ 2ನೇ ತರಗತಿ ವಿದ್ಯಾರ್ಥಿಯ ಗುಪ್ತಾಂಗಕ್ಕೆ ಸಹಪಾಠಿಗಳು ದಾರವನ್ನು ಕಟ್ಟಿದ್ದು, ಇದರಿಂದ ವಿದ್ಯಾರ್ಥಿಯು ಆಸ್ಪತ್ರೆಗೆ ಸೇರುವಂತೆ ಆಗಿದೆ.
ದಕ್ಷಿಣ ದೆಹಲಿಯ ಕಿದ್ವಾಯಿ ನಗರದಲ್ಲಿರುವ ಅಟಲ್ ಆದರ್ಶ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಎಂಟು ವರ್ಷದ ಸಹಪಾಠಿಯ ಖಾಸಗಿ ಅಂಗಕ್ಕೆ ನೈಲೋನ್ ಮಾದರಿಯ ದಾರವನ್ನು ವಿದ್ಯಾರ್ಥಿಗಳು ಕಟ್ಟಿದ್ದಾರೆ. ಡಿಸೆಂಬರ್ 28ರಂದು ಸ್ನಾನದ ಸಮಯದಲ್ಲಿ ಮಗುವಿನ ಪೋಷಕರು ಅದನ್ನು ಗಮನಿಸಿದ್ದಾರೆ ಎಂದು ದಕ್ಷಿಣ ಉಪ ವಿಭಾಗದ ಪೊಲೀಸ್ ಆಯುಕ್ತ ಚಂದನ್ ಚೌಧರಿ ತಿಳಿಸಿದ್ದಾರೆ.
ನಂತರ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯವರು ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್)ಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಆಸ್ಪತ್ರೆಗೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದೂ ಹೇಳಿದ್ದಾರೆ.
ಸದ್ಯ ಬಾಲಕ ವೈದ್ಯರ ನಿಗಾದಲ್ಲಿದ್ದು, ಆರೋಗ್ಯ ಸ್ಥಿತಿಯು ಸಹಜವಾಗಿದೆ. ಆರೋಪಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಬಾಲಕನ ಸಮೇತವಾಗಿ ಪೊಲೀಸ್ ತಂಡವು ಶಾಲೆಗೆ ಭೇಟಿ ನೀಡಲಿದೆ ಎಂದು ಡಿಸಿಪಿ ಚೌಧರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾತ್ರಿ ಹೊತ್ತು ಮಹಿಳಾ ರಿಕ್ಷಾ ಏರಿ ಲೈಂಗಿಕ ಹಿಂಸೆ: ಬೆತ್ತಲಾಗಿ ಚಾಲಕಿಯ ಬೆನ್ನಟ್ಟಿದ ಕಾಮುಕ