ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯುತ್ತಿದ್ದ ನಕಲಿ ರಫ್ತುದಾರರ ಜಾಲ ಭೇದಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 134 ಕೋಟಿ ರೂ.ವಂಚನೆ ಮಾಡಿದ್ದು, ಓರ್ವನ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಕಲಿ ರಫ್ತುದಾರರ ಜಾಲವನ್ನ ಚಿರಾಗ್ ಗೋಯೆಲ್ ಎಂಬ ವ್ಯಕ್ತಿ ನಿರ್ವಹಿಸುತ್ತಿದ್ದು, ಆತ ಯುಕೆ ಸುಂದರ್ಲ್ಯಾಂಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪಾನ್ ಮಸಾಲಾ, ತಂಬಾಕು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಜಿಎಎಸ್ಟಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಚಿರಾಗ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಅನೇಕ ರಫ್ತುದಾರರಿಗೆ ನಕಲಿ ಬಿಲ್ ನೀಡಿರುವುದು ವರದಿಯಾಗಿದೆ. ಆತನ ವಿರುದ್ಧ ಸಿಜಿಎಸ್ಟಿ ಕಾಯ್ದೆ 2017ರ ಸೆಕ್ಷನ್ 132(1) ಸಿ ಅಡಿ ದೂರು ದಾಖಲಾಗಿದೆ. ಇದರ ವಿಚಾರಣೆ ನಡೆಸಿರುವ ಮೆಟ್ರೋಪಾಲಿಟನ್ ಪಟಿಯಾಲ ಹೌಸ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.