ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಾದ ಏರಿಳಿತ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಷೇರು ಮಾರಾಟದಿಂದ ಸಂವೇದಿ ಸೂಚ್ಯಂಕವು 3 ದಿನಗಳ ಬಳಿಕ ಮತ್ತೆ ಭಾರಿ ಕುಸಿತ ಕಂಡಿದೆ.
ಸೋಮವಾರದ ಆರಂಭಿಕ ವಹಿವಾಟಿನ ಅವಧಿಯಲ್ಲಿ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ದಿಢೀರ್ 635 ಅಂಕಗಳನ್ನು ಕಳೆದುಕೊಂಡು, ಈ ವರ್ಷದ 5 ನೇ ಅತ್ಯಧಿಕ ನಷ್ಟ ದಾಖಲಿಸಿದೆ.
59,037 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ ಸೆನ್ಸೆಕ್ಸ್ ಹೂಡಿಕೆದಾರರ ಹಿಂತೆಗೆತ, ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಾದ ಏರಿಳಿತದಿಂದ ಶೇ.1.1 ಅಂದರೆ 635 ಅಂಕ ಕಳೆದುಕೊಂಡು 58,402 ಅಂಕಗಳಿಗೆ ಇಳಿದಿದೆ. ಈ ಮೂಲಕ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿದೆ.
ಇನ್ನು, 17,617 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ ನಿಫ್ಟಿ ಕೂಡ 193 ಅಂಕ ಕಳೆದುಕೊಂಡು(ಶೇ.1.1) 17,423 ಅಂಕಕ್ಕೆ ಇಳಿದಿದೆ. ಷೇರು ಮಾರುಕಟ್ಟೆಯ ದಿಢೀರ್ ಕುಸಿತದಿಂದ ದಿವಿಸ್ ಲ್ಯಾಬ್ಸ್, ಬಜಾಜ್ ಫೈನಾನ್ಸ್, ವಿಪ್ರೋ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೆಕ್ ಮಹೀಂದ್ರಾ ಸೇರಿದಂತೆ ಪ್ರಮುಖ ಕಂಪನಿಗಳು ನಷ್ಟ ಅನುಭವಿಸಿವೆ.
ದಿನದ ಆರಂಭಿಕ ವಹಿವಾಟಿನ ಕುಸಿತದ ಮಧ್ಯೆಯೂ ಸಿಪ್ಲಾ, ಒಎನ್‌ಜಿಸಿ, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಅಲ್ಪ ಲಾಭ ಕಂಡಿವೆ.
ಇದನ್ನೂ ಓದಿ: ಯುಲಿಪ್ ಪಾಲಿಸಿಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಇದು ಎಷ್ಟು ಲಾಭಕರ?