ತಿರುವನಂತಪುರ, ಕೇರಳ: ಮೀನಂ ಪೂಜಾ ಮತ್ತು ಉತ್ರಂ ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಒಂದು ದಿನಕ್ಕೆ 10 ಸಾವಿರ ಭಕ್ತರಿಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಮಾರ್ಚ್ 15ರಿಂದ 20ರವರೆಗೆ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಬಹುದಾಗಿದೆ. ದೇವಾಲಯ ಪ್ರವೇಶಕ್ಕೆ ಆನ್ಲೈನ್ನಲ್ಲಿ ಕಾಯ್ದಿರಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. 48 ಗಂಟೆಗಳ ಅವಧಿಯೊಳಗಿನ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಎಫೆಕ್ಟ್: ಸಂಕಷ್ಟದಲ್ಲಿ ಫುಡ್ ಡೆಲಿವರಿ ಬಾಯ್ಸ್
ಈಗ ಸದ್ಯಕ್ಕೆ ದಿನಕ್ಕೆ 5 ಸಾವಿರ ಮಂದಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಭಕ್ತರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ದೇವಸ್ವಂ ಮಂಡಳಿ ಚಿಂತನೆ ನಡೆಸಿದ್ದು, ಈಗ ಕಾರ್ಯರೂಪಕ್ಕೆ ತಂದಿದೆ.
ಈ ಮೊದಲು ಏಳು ತಿಂಗಳು ಮುಚ್ಚಿದ್ದ ದೇವಸ್ಥಾನವನ್ನು ನವೆಂಬರ್ನಲ್ಲಿ ತೆರೆಯಲಾಗಿತ್ತು. ಮಕರವಿಳುಕ್ಕು ಸಮಾರಂಭದ ಹಿನ್ನೆಲೆಯಲ್ಲಿ ಕೇವಲ 2 ಸಾವಿರ ಮಂದಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ 5 ಸಾವಿರ ಮಂದಿಗೆ ಭಕ್ತರ ಸಂಖ್ಯೆಯನ್ನು ಏರಿಸಲಾಯಿತು. ಈಗ ಭಕ್ತರ ಸಂಖ್ಯೆಯನ್ನು ದಿನಕ್ಕೆ 10 ಸಾವಿರ ಮಂದಿಗೆ ಏರಿಸಲಾಗಿದೆ.