ಚಂಡೀಗಢ(ಪಂಜಾಬ್): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ರಾಜ್ಯದ ಸುಲ್ತಾನ್‌ಪುರ ಲೋಧಿ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ದೊರೆತ ಪತ್ರದಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಈ ಪತ್ರದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಜೊತೆಗೆ ರಾಜ್ಯದ ಪ್ರಮುಖ ರೈಲ್ವೇ ನಿಲ್ದಾಣಗಳಾದ ಜಲಂಧರ್, ಸುಲ್ತಾನ್‌ಪುರ ಲೋಧಿ ಹಾಗೂ ಇನ್ನಿತರ ಪ್ರಮುಖ ಸ್ಥಳಗಳನ್ನು ಬಾಂಬ್ ಹಾಕಿ ಸ್ಫೋಟಿಸುವುದಾಗಿ ಹೇಳಲಾಗಿದೆ.
ಮುಖ್ಯಮಂತ್ರಿ ಮಾನ್ ಜೊತೆಗೆ ಶಿರೋಮಣಿ ಅಕಾಲಿದಳದ ನಾಯಕರಿಗೂ ಬೆದರಿಕೆ ಹಾಕಲಾಗಿದೆ. ಈ ಪತ್ರದಲ್ಲಿ ಉಗ್ರಗಾಮಿ ಸಂಘಟನೆ ಜೈಷ್-ಎ-ಮೊಹಮ್ಮದ್ ಸಹಿ ಇರುವುದಾಗಿ ಹೇಳಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಸ್ಟೇಷನ್ ಮಾಸ್ಟರ್ ರಾಜ್‌ವೀರ್ ಸಿಂಗ್ ಹೇಳಿದ್ದಾರೆ. ಅವರು ಪತ್ರವನ್ನು ಓದಿದ ಕೂಡಲೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿತರನ್ನು ಬಂಧಿಸಲು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ.