ಇಡುಕ್ಕಿ (ಕೇರಳ): ಆರು ವರ್ಷದ ಬಾಲಕನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನಲೆ ಮರಣ ದಂಡನೆ ಮತ್ತು ಬಾಲಕನ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸೇರಿ ನಾಲ್ಕು ಅಪರಾಧಗಳ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಅನಾಚಲ ಸಮೀಪದ ಅಮಕ್ಕಂಡಂ ಎಂಬಲ್ಲಿ ಈ ಘಟನೆ ನಡೆದಿದೆ. ಇಡುಕ್ಕಿ ತ್ವರಿತ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಮಕ್ಕಳ ತಾಯಿಯ ಸಹೋದರಿಯ ಪತಿ ದೋಷಿ ಎಂದು ಸಾಬೀತಾಗಿದೆ.
ನ್ಯಾಯಾಲಯವು ಅಕ್ಟೋಬರ್ 3, 2021 ರಂದು ಮಾಡಿದ ಅಪರಾಧದ ತೀರ್ಪನ್ನು ಘೋಷಿಸಿತು. ಆರು ವರ್ಷದ ಬಾಲಕನನ್ನು ಕೊಂದಿದ್ದಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಯಿತು. ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಲ್ಲಲು ಯತ್ನಿಸಿದ ನಾಲ್ಕು ಅಪರಾಧಗಳಿಗಾಗಿ ಅಪರಾಧಿಯು ಪ್ರತ್ಯೇಕವಾಗಿ ನಾಲ್ಕು ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಒಟ್ಟಾರೆಯಾಗಿ ವಿವಿಧ ವಿಭಾಗಗಳಲ್ಲಿ ಅಪರಾಧಿಗೆ 92 ವರ್ಷಗಳ ಜೈಲು ಶಿಕ್ಷೆಯಾಗಿದೆ.
ಅಲ್ಲದೇ, ದಂಡ ಪಾವತಿಸದೇ ಇದ್ದಲ್ಲಿ ಇನ್ನೂ 11 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಇಡುಕ್ಕಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ ವರ್ಗೀಸ್ ಆದೇಶಿಸಿದ್ದಾರೆ. ಪ್ರಕರಣದಲ್ಲಿ 73 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥ ಎಂದು ನ್ಯಾಯಾಲಯವು ಇದೇ ತಿಂಗಳ 20 ರಂದು ತೀರ್ಪು ನೀಡಿತು. ಇಡುಕ್ಕಿ ವೆಲ್ಲತುವಲ್ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣದಲ್ಲಿ ಅಪರಾಧಿಗೆ ಒಂದೂವರೆ ವರ್ಷದ ನಂತರ ಶಿಕ್ಷೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಹೆತ್ತವರನ್ನ ಕೊಲೆ ಮಾಡಿ ಪರಾರಿಯಾಗಿದ್ದ ಮಗ ಅರೆಸ್ಟ್
ಪ್ರಕರಣದ ಸಂಪೂರ್ಣ ವಿವರ: 2021 ರ ಅಕ್ಟೋಬರ್ 2 ರಂದು ಬೆಳಗಿನ ಜಾವ ಮೂರು ಗಂಟೆಗೆ ಆರೋಪಿ ಮನೆಗೆ ನುಗ್ಗಿ ಕೊಲೆ ಮಾಡಿ ಅತ್ಯಾಚಾರ ಎಸಗಿದ್ದನು. ಮೊದಲಿಗೆ ಆರೋಪಿಯು ಸುತ್ತಿಗೆಯಿಂದ 6 ವರ್ಷದ ಬಾಲಕ ಮತ್ತು ಅಜ್ಜಿಯ ತಲೆಗೆ ಹೊಡೆದಿದ್ದಾನೆ. ಈ ವೇಳೆ ಅಜ್ಜಿ ಪ್ರಜ್ಞೆ ತಪ್ಪಿ ಬಿದ್ದರೆ, ಆರು ವರ್ಷದ ಮಗು ಸಾವನ್ನಪ್ಪಿದೆ. ಆ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಬಾಲಕನ ತಾಯಿಯ ತಲೆಗೂ ಪೆಟ್ಟು ಬಿದ್ದಿದೆ.
ಬಳಿಕ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಮುಂದಿನ ಶೆಡ್ಗೆ ಕರೆದೊಯ್ದು ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಕೌಟುಂಬಿಕ ಕಲಹದಿಂದ ಆತನನ್ನು ಮನೆಯಿಂದ ಹೊರ ಹಾಕಿದ್ದು ಕೊಲೆಗೆ ಕಾರಣವಾಗಿತ್ತು ಎನ್ನಲಾಗಿದೆ. ಮಕ್ಕಳ ತಾಯಿಯ ಸಹೋದರಿಯ ಪತಿ (ಸಂಬಂಧದಲ್ಲಿ ಚಿಕ್ಕಪ್ಪ) ಯಾಗಿರುವ ಆರೋಪಿ ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್ ಮೂಲದವರು.
ಇದನ್ನೂ ಓದಿ: Wife kills husband: ಕುಡಿದ ಅಮಲಿನಲ್ಲಿ ಕೊಡಲಿಯಿಂದ ಹೊಡೆದು ಪತಿಯನ್ನೇ ಕೊಂದ ಪತ್ನಿ