ನವದೆಹಲಿ: ಕೊರೊನಾ ವೈರಸ್ನ ಹೊಸ ರೂಪಾಂತರಿ 'ಒಮಿಕ್ರೋನ್' ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ರಾಷ್ಟ್ರ ರಾಜಧಾನಿ ಕೂಡ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂದು ಈ ಬಗ್ಗೆ ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಸಭೆ ಕರೆದಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ತಜ್ಞರು ಮತ್ತು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ದೆಹಲಿಗೆ ಬಂದಿಳಿಯುವ ಎಲ್ಲಾ ಪ್ರಯಾಣಿಕರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು ಹಾಗೂ ಒಮಿಕ್ರೋನ್ ವರದಿಯಾಗಿರುವ ದಕ್ಷಿಣ ಆಫ್ರಿಕಾ, ಬ್ರಿಟನ್, ಬೋಟ್ಸ್‌ವಾನಾ, ಜಿಂಬಾಬ್ವೆ, ಹಾಂಕಾಂಗ್, ಬೆಲ್ಜಿಯಂ ಮತ್ತು ಇಸ್ರೇಲ್ ದೇಶಗಳಿಂದ ದೆಹಲಿಗೆ ಬಂದಿಳಿಯುವ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಒಳಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೊಸ ಕೋವಿಡ್ ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು.. ಏನಿದು ಒಮಿಕ್ರೋನ್?
B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ ' ಒಮಿಕ್ರೋನ್ ' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಇದೀಗ ಈ ತಳಿ ಇತರ ದೇಶಗಳಿಗೂ ಹರಡುತ್ತಿದೆ.
ಕೋವಿಡ್ ಎರಡನೇ ಅಲೆ ವೇಳೆ ಉಲ್ಬಣಿಸಿದ್ದ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ರಾಷ್ಟ್ರ ರಾಜಧಾನಿ ಜನರ ಜೀವನವನ್ನು ಸಹಜ ಸ್ಥಿತಿಗೆ ತಂದಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇದೀಗ ಒಮಿಕ್ರೋನ್ ವಕ್ರದೃಷ್ಟಿ ಬೀರದಂತೆ ಕಠಿಣ ನಿಯಮಾವಳಿಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ.