ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಡಿಡಿಸಿ ಚುನಾವಣೆಗಳು ಈ ಪ್ರದೇಶದಲ್ಲಿ ಹೊಸ ಅಧ್ಯಾಯ ಬರೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಪ್ರಯೋಜನಗಳನ್ನು ಕೇಂದ್ರಾಡಳಿತ ಪ್ರದೇಶದ ಎಲ್ಲಾ ನಿವಾಸಿಗಳಿಗೆ ವಿಸ್ತರಿಸಲು ವಿಡಿಯೋ-ಕಾನ್ಫರೆನ್ಸ್ ಮೂಲಕ ಯೋಜನೆಯನ್ನು ಪ್ರಾರಂಭಿಸಿದ ಮೋದಿ, ಪಾರದರ್ಶಕ ಚುನಾವಣಾ ಪ್ರಕ್ರಿಯೆ ಮತ್ತು ಮತದಾರರು ಉತ್ಸಾಹದಿಂದ ಭಾಗವಹಿಸುವುದನ್ನು ಉಲ್ಲೇಖಿಸಿ ಇದು ಭಾರತಕ್ಕೆ "ಹೆಮ್ಮೆಯ ಕ್ಷಣ" ಎಂದು ಹೇಳಿದ್ದಾರೆ.
ಇದೇ ವೇಳೆ ಪುದುಚೇರಿಯಲ್ಲಿ "ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳನ್ನು ನಡೆಸದಿದ್ದಾಗ" ಪ್ರಜಾಪ್ರಭುತ್ವದ ಪಾಠ ಬೋಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ "ಅಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದೆ" ಎಂದು ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಒಂದು ವರ್ಷದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಗಳು ನಡೆದಿವೆ ಎಂದು ಮೋದಿ ಹೇಳಿದ್ದಾರೆ.
ಹೆಸರೇಳದೆ ಕಾಂಗ್ರೆಸ್ ಮೇಲೆ ದಾಳಿ ಮಾಡಿದ ಅವರು, ದೆಹಲಿಯಲ್ಲಿ ಕೆಲವರು ನನಗೆ ಪ್ರತಿದಿನ ಪ್ರಜಾಪ್ರಭುತ್ವದ ಪಾಠಗಳನ್ನು ಹೇಳುತ್ತಾರೆ, ನಿಂದಿಸುತ್ತಾರೆ. ಆದರೆ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಅವರು ಪುದುಚೇರಿಯಲ್ಲಿ ಪಂಚಾಯತ್ ಚುನಾವಣೆ ನಡೆಸಿಲ್ಲ ಎಂದಿದ್ದಾರೆ.
ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಕುರಿತು ಮೋದಿ ಸರ್ಕಾರದ ಮೇಲೆ ಇತ್ತೀಚೆಗೆ ನಡೆದ ಕಿಡಿ ಕಾರಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದಲ್ಲಿ "ಪ್ರಜಾಪ್ರಭುತ್ವವಿಲ್ಲ" ಎಂದು ಹೇಳಿಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಜನರು ತಮ್ಮ ಕೆಲಸಗಳಿಂದಾಗಿ ಗೆದ್ದಿದ್ದಾರೆ, ಹೆಸರುಗಳಿಂದ ಅಲ್ಲ. ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಯನ್ನು ಕೇಂದ್ರ ಕೈಗೆತ್ತಿಕೊಂಡಿದೆ ಎಂದಿದ್ದಾರೆ.