ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಲೈಂಗಿಕ ದೌರ್ಜನ್ಯದ ಬೆದರಿಕೆ ಹಾಕಲಾಗುತ್ತಿದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬುಧವಾರ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್‌ನಿಂದ ಹೊರಹಾಕುವಂತೆ ನಾನು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವರಿಗೆ ಪತ್ರ ಬರೆದಾಗಿನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ನಿಸ್ಸಂಶಯವಾಗಿ ಅವರು ನಮ್ಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ನಾನು ದೆಹಲಿ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಎಫ್‌ಐಆರ್ ದಾಖಲಿಸಿ ತನಿಖೆ ಮಾಡಿ. ಇದರ ಹಿಂದೆ ಇರುವವರನ್ನು ಬಂಧಿಸಿ ಎಂದು ಅವರು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಸಾಜಿದ್ ಖಾನ್ ವಿರುದ್ಧ ಬಂದಿರುವ ಹಲವಾರು ದೂರುಗಳು ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಸೋಮವಾರದಂದು ಡಿಸಿಡಬ್ಲ್ಯೂ ಮುಖ್ಯಸ್ಥರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.
#MeToo ಆಂದೋಲನದ ಸಂದರ್ಭದಲ್ಲಿ 10 ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ, ಅದು ತಪ್ಪು. ಈ ಕಾರ್ಯಕ್ರಮದಿಂದ ಸಾಜಿದ್ ಖಾನ್ ಅವರನ್ನು ತೆಗೆದುಹಾಕುವಂತೆ ಕೋರಿ ನಾನು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಿಟೂ ಅಭಿಯಾನದ ಸಮಯದಲ್ಲಿ ಸಾಜಿದ್ ಖಾನ್ ವಿರುದ್ಧ ಆರೋಪಗಳನ್ನು ಮಾಡಿದ್ದ ನಟಿ ಮಂದನಾ ಕರೀಮಿ, ಬಿಗ್ಬಾಸ್ನಲ್ಲಿ ಸಾಜಿದ್ ಖಾನ್ ರಂಥವರಿಗೆ ಸ್ಥಾನ ನೀಡಿದ್ದು ನೋಡಿದರೆ ಇನ್ನುಮುಂದೆ ಬಾಲಿವುಡ್ನಲ್ಲಿ ಕೆಲಸ ಮಾಡುವ ಇಚ್ಛೆ ನನಗಿಲ್ಲ ಎಂದು ಹೇಳಿದ್ದಾರೆ. ಗಾಯಕಿ ಸೋನಾ ಮೊಹಾಪಾತ್ರಾ ಕೂಡ ಸಾಜಿದ್ ಎಂಟ್ರಿಯನ್ನು ಪ್ರಶ್ನಿಸಿದ್ದಾರೆ. ಶೋನಲ್ಲಿ ಸಾಜಿದ್ ಬಂದಿದ್ದಕ್ಕೆ ಶೆಹ್ನಾಜ್ ಗಿಲ್ ಮತ್ತು ಕಶ್ಮೇರಾ ಶಾ ಬೆಂಬಲಿಸಿದ್ದನ್ನು ಉರ್ಫಿ ಜಾವೇದ್ ಖಂಡಿಸಿದ್ದಾರೆ.
ಇದನ್ನೂ ಓದಿ: 80 ಲಕ್ಷ ಕೊಟ್ಟು ರೇಪ್ ಕೇಸ್ ರಾಜಿ ಮಾಡಿಕೊಂಡ ಕೇರಳ ಸಿಪಿಐಎಂ ಮುಖಂಡನ ಪುತ್ರ!