ಮುಂಬೈ: 'ಎನ್‌ಕೌಂಟರ್ ಸ್ಪೆಷಲಿಸ್ಟ್ ' ಎಂದೇ ಪ್ರಖ್ಯಾತರಾದ ಖಡಕ್ ಪೊಲೀಸ್ ಅಧಿಕಾರಿ, ಕರ್ನಾಟಕ ಮೂಲದವರಾದ ದಯಾ ನಾಯಕ್ ಅವರು ಶನಿವಾರ ಮುಂಬೈ ಪೊಲೀಸ್ ಅಪರಾಧ ವಿಭಾಗದ 9 ನೇ ಘಟಕದ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ್ದ ನಾಯಕ್ ಅವರನ್ನು ಮಾರ್ಚ್ 28 ರಂದು ಎಟಿಎಸ್ನಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ದಯಾ ನಾಯಕ್, "ಎಟಿಎಸ್ ಮಹಾರಾಷ್ಟ್ರದಲ್ಲಿ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ಇಂದು ನಾನು ಪ್ರತಿಷ್ಠಿತ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಹೊಸ ಪೋಸ್ಟಿಂಗ್‌ಗೆ ಸೇರಿದ್ದೇನೆ. ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮುಂಬೈಗೆ ಸೇವೆ ಸಲ್ಲಿಸಲು ಬಯಸುತ್ತೇನೆ. ಜೈ ಹಿಂದ್, ಜೈ ಮಹಾರಾಷ್ಟ್ರ" ಎಂದು ತಿಳಿಸಿದ್ದಾರೆ. ಇನ್ನು ನಾಯಕ್ ಜೊತೆ ಇತರೆ ಐವರು ಅಧಿಕಾರಿಗಳು ಸಹ ಉಪನಗರ ಮನ್ಖುರ್ದ್, ಮರೈನ್ ಡ್ರೈವ್, ಕಾಂದಿವಲಿ ಮತ್ತು ಮುಂಬೈನ ಟ್ರಾಫಿಕ್ ಪೊಲೀಸ್ ಠಾಣೆಯ ವಿವಿಧ ಹುದ್ದೆಗೆ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್ ಅವರು, ಎಂಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ನೇಮಕವಾಗಿದ್ದರು. ನಂತರ ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಮೊದಲ ಪೋಸ್ಟಿಂಗ್ ಆಗಿತ್ತು. ಈ ವೇಳೆ ಮುಂಬೈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರೊಂದಿಗೆ ದಯಾ ನಾಯಕ್ ಕೆಲಸ ಮಾಡಿದ್ದರು.
ಇದನ್ನೂ ಓದಿ : ಕಾರ್ಪೊರೇಟರ್ ನಟರಾಜ್ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿಗಳು ದೋಷಮುಕ್ತ
1996 ರಲ್ಲಿ ಪ್ರದೀಪ್ ಶರ್ಮಾ ಜೊತೆ ಸೇರಿ ದಯಾ ನಾಯಕ್ ಭೂಗತ ಪಾತಕಿ ಬಬ್ಲು ಶ್ರೀವಾಸ್ತನ್ ಗ್ಯಾಂಗ್ನ ಇಬ್ಬರು ಗೂಂಡಾಗಳಿಗೆ ಗುಂಡಿಕ್ಕಿದ್ದರು. ಇದೇ ಅವರ ಮೊದಲ ಎನ್‌ಕೌಂಟರ್ ಆಗಿತ್ತು. ಈ ಪ್ರಕರಣದ ಮೂಲಕವೇ ದಯಾ ನಾಯಕ್ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಹೆಸರು ಮಾಡಿದರು. ಜೊತೆಗೆ, ಮುಂಬೈನಲ್ಲಿ ದರೋಡೆಕೋರ ಅಮರ್ ನಾಯ್ಕ್ ಬಳಿ ಕೆಲಸ ಮಾಡುತ್ತಿದ್ದ ಎಲ್ಟಿಟಿಇಯ 3 ಸದಸ್ಯರನ್ನೂ ಸಹ ನಾಯಕ್ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ : ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ವರ್ಗಾವಣೆ...ಕಾರಣ
ದಯಾ ನಾಯಕ್ ಹಲವಾರು ಭೂಗತ ಜಗತ್ತಿನ ಸಹಚರರನ್ನೂ ಕೂಡಾ ಮುಲಾಜಿಲ್ಲದೆ ಮಟ್ಟ ಹಾಕಿದ್ದಾರೆ. ಸಾದಿಕ್ ಕಾಲಿಯಾ, ರಫೀಕ್ ದಿಬ್ಸ್ವಾಲಾ, ಶ್ರೀಕಾಂತ್ ಮಾಮಾ, ಪರ್ವೇಜ್ ವಿನೋದ್ ಭಟ್ಕರ್, ಸಿದ್ದಿಕಿ ಮತ್ತು ಸುಭಾಷ್ ಸೇರಿದಂತೆ ಹತ್ತಾರು ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡುವಲ್ಲಿ ನಾಯಕ್ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದಯಾ ನಾಯಕ್ ಮುಂಬೈನಲ್ಲಿ ಮಾತ್ರವಲ್ಲದೇ ದೇಶದಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ದುಷ್ಕರ್ಮಿಗಳಿಗೆ ದುಸ್ವಪ್ನರಾಗಿ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ : 'ಎನ್‌ಕೌಂಟರ್ ಸ್ಪೆಷಲಿಸ್ಟ್' ದಯಾ ನಾಯಕ್ ಅವರ ಮೊದಲ ಎನ್‌ಕೌಂಟರ್ ಯಾವುದು ಗೊತ್ತಾ ?