ಅಲಪ್ಪುಳ (ಕೇರಳ): 'ಭಾರತ್ ಜೋಡೋ ಯಾತ್ರೆ'ಯ 12 ನೇ ದಿನ ಸೋಮವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಲಪ್ಪುಳ ಜಿಲ್ಲೆಯ ಮೀನುಗಾರರ ನಡುವಿನ ಸಂವಾದದೊಂದಿಗೆ ಪ್ರಾರಂಭವಾಯಿತು. ಆಲಪ್ಪುಳದ ವಡಕಲ್ ಬೀಚ್‌ನಲ್ಲಿ ಬೆಳಗ್ಗೆ 6 ಗಂಟೆಗೆ ಸಂವಾದ ನಡೆಯಿತು.
ಸಂವಾದದಲ್ಲಿ ಮೀನುಗಾರರಿಗೆ ಬೆಂಬಲ ಸೂಚಿಸಿದ ಅವರು, ಮೀನುಗಾರರ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದರು. ಕೂಲಿಕಾರ್ಮಿಕರಿಗೆ ಸರ್ಕಾರ ಸಹಾಯಧನ ನೀಡುತ್ತಿಲ್ಲ, ಆದರೆ ಸರ್ಕಾರದೊಂದಿಗೆ ನಿಕಟವಾಗಿರುವ ಕೋಟ್ಯಧಿಪತಿಗಳಿಗೆ ಸಾಕಷ್ಟು ಸಹಾಯ ನೀಡುತ್ತಿದೆ. ಸರ್ಕಾರದ ಸಬ್ಸಿಡಿ ಎಲ್ಲಿ ಹೋಗುತ್ತಿದೆ ಎಂದು ಎಲ್ಲರೂ ಯೋಚಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ಮೀನುಗಾರರೊಂದಿಗೆ ಚಿತ್ರ ತೆಗೆಸಿಕೊಂಡ ಅವರು, ಅವರೊಂದಿಗೆ ಸಮಯ ಕಳೆದು ಸಂತಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಯಾವುದೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಆರೋಪಿಸಿದರು.
'ಸಾಮಾನ್ಯ ಜನರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸರಕಾರಕ್ಕೆ ಆಸಕ್ತಿ ಇಲ್ಲ. ಅವರಿಗೆ ಕೆಲಸ ಕೊಡಿಸಲು ಕೂಡ ಆಸಕ್ತಿ ಇಲ್ಲ. ಕೇಂದ್ರ ಸರಕಾರಕ್ಕೆ ಎರಡರಿಂದ ಮೂರು ಶ್ರೀಮಂತರ ಬಗ್ಗೆ ಮಾತ್ರ ಆಸಕ್ತಿ ಇದೆ. ಸಣ್ಣ ಪ್ರಮಾಣದ ಉದ್ಯಮಿಗಳು, ರೈತರು ಮತ್ತು ದಿನಗೂಲಿ ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಪಾದಯಾತ್ರೆ 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು 12 ರಾಜ್ಯಗಳನ್ನು ಒಳಗೊಂಡಿದೆ. ಯಾತ್ರೆಯು ಮುಂದಿನ 18 ದಿನಗಳ ಕಾಲ ಕೇರಳ ರಾಜ್ಯದ ಮೂಲಕ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕ ತಲುಪಲಿದೆ.
ಇದನ್ನೂ ಓದಿ: ದೇಶದ ಜನರ ಸಂಕಷ್ಟ ನಿವಾರಣೆಗೆ ಭಾರತ ಜೋಡೋ ಯಾತ್ರೆ: ಕಾಂಗ್ರೆಸ್