ನವದೆಹಲಿ: ಭೂಗತ ಲೋಕದ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡಲು ತಯಾರಿ ಮಾಡಿಕೊಂಡಿದ್ದನು. ಅದಕ್ಕಾಗಿಯೇ ತನ್ನ ನೇತೃತ್ವದ ಡಿ-ಕಂಪನಿ ಎಂಬ ವಿಶೇಷ ಘಟಕ ಸ್ಥಾಪಿಸಿದ್ದನು. ಅಷ್ಟೇ ಅಲ್ಲ, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಮಾರಕಾಸ್ತ್ರಗಳ ವ್ಯವಸ್ಥೆ ಮಾಡಿಕೊಂಡಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಭಾರತದಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಗಂಭೀರ ಆರೋಪದಡಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಸೇರಿದಂತೆ ಇಬ್ಬರು ಮೋಸ್ಟ್ ವಾಂಟೆಡ್ ಮತ್ತು ಮೂವರು ಬಂಧಿತರ ವಿರುದ್ಧ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ವಿಚಾರಗಳ ಉಲ್ಲೇಖವಿದೆ.
ರಾಜಕಾರಣಿಗಳು ಮತ್ತು ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಡಿ-ಕಂಪನಿಯು ಘಟಕವನ್ನು ಸ್ಥಾಪಿಸಿದೆ. ಬಂಧಿತರು ಹಾಗೂ ಅಗತ್ಯವಾಗಿ ಬೇಕಾಗಿರುವ ಆರೋಪಿಗಳು ಈ ಭಯೋತ್ಪಾದಕ ಘಟಕದ ಸಕ್ರಿಯ ಸದಸ್ಯರಾರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರಿಫ್ ಅಬೂಬಕರ್ ಶೇಖ್ ಅಲಿಯಾಸ್ ಆರಿಫ್ ಭಾಯಿಜಾನ್, ಶಬ್ಬೀರ್ ಅಬೂಬಕರ್ ಶೇಖ್ ಅಲಿಯಾಸ್ ಶಬ್ಬೀರ್, ಮೊಹಮ್ಮದ್ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಮತ್ತು ದಾವೂದ್ ಇಬ್ರಾಹಿಂ ಕಸ್ಕರ್ ಅಲಿಯಾಸ್ ಶೇಖ್ ದಾವೂದ್ ಹಸನ್ ಮತ್ತು ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್ ವಿರುದ್ಧ ಸೆಕ್ಷನ್ 17, 18, 20 ಮತ್ತು 21 ರ ಅಡಿಯಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
ಇದನ್ನೂ ಓದಿ: ಜೆಜೆ ಆಸ್ಪತ್ರೆ ಶೂಟೌಟ್ ಪ್ರಕರಣ: 20 ವರ್ಷಗಳ ನಂತರ ಕೇಸ್ ರೀ ಓಪನ್, ದಾವೂದ್ ಸಹಚರನಿಗೆ ಸಂಕಷ್ಟ
ಈಗ ಬಂಧಿಸಲಾಗಿರುವ ಆರೋಪಿಗಳು ಮುಂಬೈ ಮತ್ತು ಭಾರತದ ಇತರ ಭಾಗಗಳ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಸುವ ಕೆಲಸಕ್ಕೆ ತಲೆಮರೆಸಿಕೊಂಡು ವಿದೇಶದಲ್ಲಿ ನೆಲೆಸಿರುವ ಆರೋಪಿಗಳಿಂದ ಹವಾಲಾ ಮಾರ್ಗಗಳ ಮೂಲಕ ಅಪಾರ ಪ್ರಮಾಣದ ಹಣ ಪಡೆದಿದ್ದಾರೆ. ಪಾಕಿಸ್ತಾನದಿಂದ ದುಬೈ ಮೂಲಕ ಮುಂಬೈಗೆ ಹವಾಲಾ ಮೂಲಕ ಆರಿಫ್ ಮತ್ತು ಶಬ್ಬೀರ್‌ಗೆ ಒಟ್ಟು 25 ಲಕ್ಷ ರೂ ರವಾನೆಯಾಗಿದೆ. ಇದು ಭಯೋತ್ಪಾದನೆಯ ಆದಾಯ ಹೊರತಾಗಿ ಬೇರೇನೂ ಅಲ್ಲ. ಈ ಘಟಕದ ಸದಸ್ಯರಾಗಿರುವ ಆರೋಪಿಗಳು ವಿವಿಧ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ಯಾಂಗ್‌ನ ಅಪರಾಧ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಭಾರತದ ಭದ್ರತೆಗೆ ಧಕ್ಕೆ ತರುವ ಹಾಗೂ ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ವ್ಯಕ್ತಿಗಳನ್ನು ಹೆದರಿಸಿ, ಕೊಲೆ ಬೆದರಿಕೆ ಹಾಕಿ, ಚಿತ್ರಹಿಂಸೆ ನೀಡುವ ಮೂಲಕ ಡಿ ಕಂಪನಿ ಘಟಕ ಅಪಾರ ಪ್ರಮಾಣದ ಹಣ ಸಂಗ್ರಹಿಸಿದೆ ಎನ್ನುವ ಪ್ರಮುಖ ಅಂಶಗಳೂ ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ದಾವೂದ್ ಜೊತೆ ನಂಟು ಹೊಂದಿದ್ದ ಕ್ರಿಮಿನಲ್ ರಾಹುಲ್ ಭಾಟಿಯಾ ಅರೆಸ್ಟ್