ಮುಂಬೈ (ಮಹಾರಾಷ್ಟ್ರ): ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಈಗಾಗಲೇ ಬಂಧಿಸಿದ್ದು, ಅವನನ್ನು ಕೆಲ ಕಾಲ ವಿಚಾರಣೆ ನಡೆಸಿ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆ್ಯಕ್ಟ್(ಎಂಸಿಒಸಿಎ) ನ್ಯಾಯಾಲಯದ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಿಂದ ಮುಂಬೈಗೆ ಚರಸ್ ಕಳ್ಳಸಾಗಣೆ ಮಾಡಿರುವ ಹಿನ್ನೆಲೆ ಥಾಣೆ ಜೈಲಿನಲ್ಲಿದ್ದ ಇಕ್ಬಾಲ್ ಕಸ್ಕರ್‌ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದರು. ಇದೀಗ ವಿಚಾರಣೆ ನಡೆಸಿ ಮತ್ತೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಡಿಜಿ ಮುತಾ ಅಶೋಕ್ ಜೈನ್, ದಾವೂದ್ ಇಬ್ರಾಹಿಂ ಅವರ ಸಹೋದರ ಇಕ್ಬಾಲ್ ಕಸ್ಕರ್ ಅವರನ್ನು ವಿಚಾರಣೆ ನಡೆಸಿದ್ದು, ನಂತರ ಥಾಣೆಯ ಎಂಸಿಒಸಿಎ ನ್ಯಾಯಾಲಯದ ಕಸ್ಟಡಿಗೆ ಕಳುಹಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಬುಧವಾರ ಕಸ್ಕರ್‌ನನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಶಕ್ಕೆ ತೆಗೆದುಕೊಂಡಿದೆ. ಡ್ರಗ್ಸ್ ಪ್ರಕರಣದ ತನಿಖೆ ಸಮಯದಲ್ಲಿ ಭೂಗತ ಜಗತ್ತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪಡೆದುಕೊಂಡಿದೆ.