ಕೋಟಾ (ರಾಜಸ್ಥಾನ) : ರಾಜಸ್ಥಾನದ ಕೋಟಾವನ್ನು ದೇಶದ ಕೋಚಿಂಗ್ ಹಬ್ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಕೋಚಿಂಗ್ ಪಡೆಯಲು ಆಗಮಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಯನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ರಾಜಸ್ಥಾನ ಪೊಲೀಸರು ಹೊಸ ಅಭಿಯಾನ ಆರಂಭಿಸಿದ್ದಾರೆ.
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು "ದರ್ವಾಜ್ ಪೆ ದಸ್ತಕ್" ಅಭಿಯಾನ" : ವಿದ್ಯಾರ್ಥಿಗಳಲ್ಲಿನ ಮಾನಸಿಕ ಖಿನ್ನತೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ನಿಟ್ಟಿನಲ್ಲಿ ದರ್ವಾಜ್ ಪೆ ದಸ್ತಕ್ (ಬಾಗಿಲು ತಟ್ಟಿ) ಅಭಿಯಾನವನ್ನು ಪೊಲೀಸರು ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಪೊಲೀಸರು, ಹಾಸ್ಟೆಲ್ ವಾರ್ಡನ್ಗಳು, ಮೆಸ್ನಲ್ಲಿ ಕೆಲಸ ಮಾಡುವವರನ್ನು ಸೇರಿಸಿಕೊಳ್ಳಲಾಗಿದೆ.
ಹಾಸ್ಟೆಲ್ ವಾರ್ಡನ್ಗಳು, ಮೆಸ್ನಲ್ಲಿ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸುವವರು ವಿದ್ಯಾರ್ಥಿಗಳು ಸರಿಯಾಗಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸುತ್ತಾರೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಸರಿಯಾಗಿ ಆಹಾರವನ್ನು ಸೇವಿಸದಿದ್ದಲ್ಲಿ ಇದಕ್ಕೆ ಕಾರಣ ಕಂಡು ಹಿಡಿಯುವುದು, ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು. ಅಲ್ಲದೆ ಈ ಸಂಬಂಧ ಒಂದು ಹೆಲ್ಪ್ ಲೈನ್ ಕೂಡ ಪ್ರಾರಂಭಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಖಿನ್ನತೆ ಕಂಡುಬಂದಲ್ಲಿ ಕೂಡಲೇ ಈ ಸಂಖ್ಯೆಗೆ ಸಂಪರ್ಕಿಸುವುದು. ಇದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಬಹುದು.
ಈ ಬಗ್ಗೆ ಮಾಹಿತಿ ನೀಡಿದ ಕೋಟಾ ಎಎಸ್ಪಿ ಚಂದ್ರಶೀಲ್ ಠಾಕೂರ್ ಅವರು, ಈ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಮೆಸ್ನವರು ಮತ್ತು ವಾರ್ಡನ್ಗಳು ಮೇಲ್ವಿಚಾರಣೆ ನಡೆಸುತ್ತಾರೆ. ಇವರು ವಿದ್ಯಾರ್ಥಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಾರೆ. ಅಲ್ಲದೆ ವಾರ್ಡನ್ಗಳು ವಿದ್ಯಾರ್ಥಿಗಳ ಜೊತೆ ಉತ್ತಮ ಸಂಬಂಧ ಹೊಂದಬೇಕು. ಅಲ್ಲದೆ ವಿದ್ಯಾರ್ಥಿಗಳು ಆಹಾರವನ್ನು ಸೇವಿಸದಿದ್ದರೆ,ಈ ಬಗ್ಗೆ ಅವರಲ್ಲಿ ಕೇಳಬೇಕು. ಮೆಸ್ನವರು ವಿದ್ಯಾರ್ಥಿಗಳ ಕೊಠಡಿಗಳ ಬಾಗಿಲು ತಟ್ಟಬೇಕು. ಪ್ರತಿ ದಿನ ವಾರ್ಡನ್ಗಳು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಬೇಕು. ವಿದ್ಯಾರ್ಥಿಗಳ ಸ್ಥಿತಿಗತಿಯನ್ನು ಅರಿಯಬೇಕು ಎಂದು ಹೇಳಿದರು.
ಈ ರೀತಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವುದರಿಂದ ಅವರ ಮಾನಸಿಕ ಖಿನ್ನತೆಯನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಬಹುದು. ಪ್ರತಿ ವರ್ಷ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕೋಚಿಂಗ್ ಪಡೆಯಲು ಕೋಟಾಗೆ ಆಗಮಿಸುತ್ತಿದ್ದಾರೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಸುಮಾರು 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಆಗಸ್ಟ್ 27ರಂದು ಕೆಲವೇ ಗಂಟೆಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ರಾಜಸ್ಥಾನ ಪೊಲೀಸರು ದರ್ವಾಜ್ ಪೆ ದಸ್ತಕ್ ಅಭಿಯಾನವನ್ನು ಆರಂಭಿಸಿದ್ದಾರೆ.(PTI)
ಇದನ್ನೂ ಓದಿ : Student suicide: ಕೋಟಾದಲ್ಲಿ ಮತ್ತೊಬ್ಬ ಐಐಟಿ ಆಕಾಂಕ್ಷಿ ಆತ್ಮಹತ್ಯೆ: 8 ತಿಂಗಳಲ್ಲಿ 22ನೇ ಸಾವು ಪ್ರಕರಣ!