ನವದೆಹಲಿ: ದಲಿತರು ಕಾಂಗ್ರೆಸ್ ತೆಕ್ಕೆಗೆ ಮರಳಲು ಸಿದ್ಧರಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ತನ್ನ ಸಾಂಪ್ರದಾಯಿಕ ಬೆಂಬಲ ಮರಳಿ ಪಡೆಯಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಎಐಸಿಸಿಯ ಹಿರಿಯ ಪದಾಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ. ದಲಿತ ಸಮುದಾಯಗಳು ಪ್ರಾದೇಶಿಕ ಪಕ್ಷಗಳ ಮೇಲೆ ಭರವಸೆ ಕಳೆದುಕೊಂಡಿವೆ ಮತ್ತು ತಾವು ಕಾಂಗ್ರೆಸ್ ತೆಕ್ಕೆಗೆ ಮರಳಬೇಕು ಎಂಬ ಅರಿವು ಅವರಿಗಿದೆ.
ಆದಾಗ್ಯೂ, ಅವರನ್ನು ಮರಳಿ ಕರೆತರಲು ಪಕ್ಷ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಗುಂಪುಗಳ ಎಐಸಿಸಿ ರಾಷ್ಟ್ರೀಯ ಸಂಯೋಜಕ ಕೆ. ರಾಜು ಈಟಿವಿ ಭಾರತ್‌ಗೆ ತಿಳಿಸಿದರು.
ದಲಿತರು ಕಾಂಗ್ರೆಸ್‌ನ ಸಾಂಪ್ರದಾಯಿಕ ಬೆಂಬಲಿಗರಾಗಿದ್ದರು. ಆದರೆ, ಅವರು ಕಳೆದ ಮೂರು ದಶಕಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳತ್ತ ವಾಲಿದ್ದಾರೆ. ಕಳೆದ ಕೆಲ ತಿಂಗಳುಗಳಲ್ಲಿ ಅನೇಕ ರಾಜ್ಯಗಳಲ್ಲಿ ಬಿಎಸ್ಪಿ ದುರ್ಬಲಗೊಳ್ಳುತ್ತಿರುವ ಮಧ್ಯೆ ಕಾಂಗ್ರೆಸ್ ತನ್ನ ದಲಿತ ಬೆಂಬಲದ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ದಲಿತ ಮುಖಂಡ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಅವರ ಆಯ್ಕೆ ನಮ್ಮ ಪ್ರಜಾಪ್ರಭುತ್ವದ ಅರ್ಹತೆಯನ್ನು ಹೆಚ್ಚಿಸಿದೆ. ದಲಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ರಾಷ್ಟ್ರೀಯ ಯೋಜನೆ ಜಾರಿಯಲ್ಲಿದೆ. ಆದರೆ, ಈ ಬಗ್ಗೆ ಹೊಸ ಮುಖ್ಯಸ್ಥರು ನಂತರ ಮಾಹಿತಿ ನೀಡಲಿದ್ದಾರೆ ಎಂದು ರಾಜು ಹೇಳಿದರು.
ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಜನ್ಮದಿನದ ಸ್ಮರಣಾರ್ಥ ಮಧ್ಯಪ್ರದೇಶದ ಮೊವ್‌ನಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಮೂಲಕ ಸಾಗುತ್ತಿದ್ದು, ಕಾಂಗ್ರೆಸ್ ವ್ಯವಸ್ಥಾಪಕರು ಶನಿವಾರ ದೊಡ್ಡ ಕಾರ್ಯಕ್ರಮ ಯೋಜಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂವಿಧಾನ ಮತ್ತು ಅದರ ವಿವಿಧ ಅಂಗಸಂಸ್ಥೆಗಳನ್ನು ಉಳಿಸುವ ಅವಶ್ಯಕತೆಯಿದೆ ಎಂಬುದನ್ನು ರಾಹುಲ್ ಕಳೆದ ತಿಂಗಳುಗಳಲ್ಲಿ ಎತ್ತಿ ತೋರಿಸಿದ್ದಾರೆ. ನಾವು ಸಂಸ್ಥೆಗಳನ್ನು ಯಾವುದೇ ಪ್ರಭಾವದಿಂದ ಮುಕ್ತವಾಗಿಡಬೇಕು. ಸಾಮಾಜಿಕ ಒಗ್ಗಟ್ಟು ಮತ್ತು ದೇಶವನ್ನು ಒಗ್ಗಟ್ಟಿನಲ್ಲಿಡಲು ಇದು ಅಗತ್ಯ ಎಂದು ರಾಜು ಹೇಳಿದರು.
ಇದನ್ನೂ ಓದಿ: ಅಭ್ಯರ್ಥಿ ಘೋಷಿಸುವ ಅಧಿಕಾರ ನನಗಾಗಲಿ ಸಿದ್ದರಾಮಯ್ಯಗಾಗಲಿ ಇಲ್ಲ: ಡಿಕೆಶಿ