ಪುಣೆ (ಮಹಾರಾಷ್ಟ್ರ) : ಪುಣೆಯ ಮಾಜಿ ಪೊಲೀಸ್ ಕಮಿಷನರ್ ಮೀರಾ ಬೋರವಣಕರ ತಾವು ಬರೆದ ಪುಸ್ತಕದಲ್ಲಿ ಕೆಲ ರಾಜಕೀಯ ರಹಸ್ಯಗಳನ್ನು ಬಯಲು ಮಾಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಯಿದೆ. ಐಪಿಎಸ್ ಅಧಿಕಾರಿ ಮೀರಾ ಬೋರವಣಕರ್ ಅವರು ತಮ್ಮ ಪುಸ್ತಕ 'ಮೇಡಂ ಕಮಿಷನರ್' ನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಈ ಪುಸ್ತಕದಲ್ಲಿ, ಮೀರಾ ಬೋರವಣಕರ್ ಅವರು ಆಗಿನ ಉಸ್ತುವಾರಿ ಸಚಿವರನ್ನು "ದಾದಾ" ಎಂದು ಉಲ್ಲೇಖಿಸಿದ್ದಾರೆ. ಅಂದರೆ ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಹೆಸರನ್ನು ನೇರವಾಗಿ ಹೇಳದೇ ದಾದಾ ಎಂದು ಹೇಳುವ ಮೂಲಕ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಿದ ಜಮೀನನ್ನು ಮುಂಬೈ ಮೂಲದ ಬಿಲ್ಡರ್ ಒಬ್ಬರಿಗೆ ನೀಡುವಂತೆ ದಾದಾ ಹೇಳಿದ್ದರು. ಆದರೆ, ಇದಕ್ಕೆ ನಾನು ಒಪ್ಪಿರಲಿಲ್ಲ ಎಂದು ಮೀರಾ ಬೋರವಣಕರ್ ಬಾಂಬ್ ಸ್ಪೋಟಿಸಿದ್ದಾರೆ. ಇಷ್ಟಾದರೂ ದಾದಾ ಎಂದರೆ ಯಾರು ಎಂಬುದನ್ನು ಪುಸ್ತಕದಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ.
ಮೇಡಂ ಕಮಿಷನರ್ ಪುಸ್ತಕದಲ್ಲಿ ಅಧಿಕಾರಿ ಮೀರಾ ಬರೆದಿದ್ದು: "ಪುಣೆ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಾನು ವಿವಿಧ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದೆ. ಜೊತೆಗೆ ಸುತ್ತಮುತ್ತಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧಗಳ ಮಾಹಿತಿ ಸಂಗ್ರಹಿಸುತ್ತಿದ್ದೆ. ಒಂದು ದಿನ ನನಗೆ ವಿಭಾಗೀಯ ಪೊಲೀಸ್ ಆಯುಕ್ತರಿಂದ ಕರೆ ಬಂತು ಮತ್ತು ಪುಣೆಯ ಉಸ್ತುವಾರಿ ಸಚಿವರು ನಿಮ್ಮ ಬಗ್ಗೆ ಕೇಳುತ್ತಿದ್ದಾರೆ ಎಂದು ಫೋನಿನಲ್ಲಿ ಮಾತನಾಡಿದವರು ಹೇಳಿದರು. ನೀವು ಈ ಬಾರಿ ಅವರನ್ನು ಭೇಟಿ ಮಾಡಿ. ಈ ವಿಷಯವು ಯೆರವಾಡಾ ಪೊಲೀಸ್ ಠಾಣೆಯ ಭೂಮಿಗೆ ಸಂಬಂಧಿಸಿದೆ ಎಂದು ಅವರು ಹೇಳಿದರು. ನಾನು ವಿಭಾಗೀಯ ಕಚೇರಿಯಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾದೆ. ಸಚಿವರ ಬಳಿ ಯೆರವಾಡಾ ಪೊಲೀಸ್ ಠಾಣೆ ಪ್ರದೇಶದ ನಕ್ಷೆ ಇತ್ತು. ಈ ಭೂಮಿಯನ್ನು ಹರಾಜು ಮಾಡಲಾಗಿದೆ ಎಂದು ಅವರು ನನಗೆ ಹೇಳಿದರು. ಅತಿ ಹೆಚ್ಚು ಮೊತ್ತದ ಬಿಡ್ ಮಾಡಿದವರಿಗೆ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿಸುವಂತೆ ಅವರು ನನಗೆ ಸೂಚಿಸಿದರು. ಆಗ ಯೆರವಾಡಾ ಪುಣೆಯ ಹೃದಯಭಾಗದಲ್ಲಿದ್ದು, ಇಂಥ ಸ್ಥಳದಲ್ಲಿ ಮತ್ತೆ ನಮಗೆ ಜಾಗ ಸಿಗಲಾರದು ಎಂದು ನಾನು ಹೇಳಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಕಚೇರಿ ಹಾಗೂ ಸಿಬ್ಬಂದಿಯ ವಸತಿಗಳ ನಿರ್ಮಾಣಕ್ಕೆ ಈ ಜಾಗ ಬೇಕಾಗುತ್ತದೆ. ನಾನು ಈಗ ತಾನೇ ಆಯುಕ್ತಳಾಗಿ ಅಧಿಕಾರ ವಹಿಸಿಕೊಂಡಿದ್ದು, ಈಗ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗೆ ನೀಡಿದರೆ ಜನ ನನ್ನನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗುತ್ತದೆ ಎಂದು ಹೇಳಿದೆ. ಆದರೆ ಆ ಸಚಿವರು ನನ್ನ ಯಾವ ಮಾತನ್ನೂ ಕೇಳಲಿಲ್ಲ ಮತ್ತು ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿಸುವಂತೆ ನನಗೆ ಪಟ್ಟು ಹಿಡಿದು ಒತ್ತಾಯಿಸಿದರು".
ಇದನ್ನೂ ಓದಿ : ಸ್ವಿಗ್ಗಿ ಪ್ಲಾಟ್ಫಾರ್ಮ್ ಫೀ ಶೇ 50ರಷ್ಟು ಹೆಚ್ಚಳ; 2 ರಿಂದ 3 ರೂ.ಗೆ ಏರಿಕೆ