ನವದೆಹಲಿ: ಅಂಡಮಾನ್ ಸಮುದ್ರದ ಉತ್ತರ ಭಾಗಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಮುಂದಿನ 24 ಗಂಟೆಗಳಲ್ಲಿ ಈ ಮಾರುತಗಳು ಪಶ್ಚಿಮ ಹಾಗೂ ನೈಋತ್ಯದೆಡೆಗೆ ಚಲಿಸಲಿದ್ದು, ಒಡಿಶಾದ ದಕ್ಷಿಣ ಭಾಗ ಹಾಗೂ ಆಂಧ್ರ ಕರಾವಳಿಯ ಉತ್ತರ ಭಾಗದತ್ತ ತಲುಪಿ ತೀವ್ರಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಅಕ್ಟೋಬರ್ 15 ರಿಂದ ಪೂರ್ವ ಮತ್ತು ಮಧ್ಯ ಭಾರತದಲ್ಲಿ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ಗುಡುಗುಸಹಿತ ವ್ಯಾಪಕ ಮಳೆಯಾಗಲಿದೆ. ಇನ್ನೂ ಕೆಲವೆಡೆ ಮಿಂಚು, ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಮಾರುತಗಳು ಬೀಸಲಿವೆ ಎಂದು ಅಂದಾಜಿಸಲಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಸಹ ಮುಂದಿನ ಐದು ದಿನಗಳವರೆಗೂ ನಿರಂತರ ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೇ, ಗುಜರಾತ್, ಮಧ್ಯ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಐದು ದಿನಗಳವರೆಗೂ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶ, ತಮಿಳುನಾಡು, ಕೇರಳ, ಮಾಹೆಯಲ್ಲಿ ಮಳೆ ಮುಂದುವರೆಯುಲಿದೆ. ಜೊತೆಗೆ ಲಕ್ಷದ್ವೀಪದಲ್ಲಿ ಮುಂದಿನ 48 ಗಂಟೆ ಹಾಗೂ ರಾಯಲಸೀಮ ಮತ್ತು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.