ನವದೆಹಲಿ: ಯಾಸ್ ಚಂಡಮಾರುತ ಹಿನ್ನೆಲೆ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ನಿರ್ಮಾಣ ಆಗಿರುವ ಹವಾಮಾನ ತೀವ್ರತೆ ‘ಯಾಸ್’ ಆಗಿ ಪರಿವರ್ತನೆಗೊಂಡಿದೆ. ಹಾಗೆ ಇದು ನಂತರ ಚಂಡಮಾರುತವಾಗಿ ಮಾರ್ಪಟ್ಟು ಮೇ 26 ರಂದು ಒಡಿಶಾ - ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮೇ 26 ರಂದು ಮಧ್ಯಾಹ್ನ ಪ್ಯಾರಾದೀಪ್ ಮತ್ತು ಸಾಗರ್ ದ್ವೀಪಗಳ ನಡುವಿನ ಒಡಿಶಾ - ಪಶ್ಚಿಮ ಬಂಗಾಳ ತೀರಗಳನ್ನು ಯಾಸ್ ಅಪ್ಪಳಿಸುವ ಸಾಧ್ಯತೆಯಿದೆ. ಇದು 155-165 ಕಿ.ಮೀ ವೇಗದಲ್ಲಿ ಗಾಳಿಯ ವೇಗವನ್ನು ಹೊಂದಿರುವ ಚಂಡಮಾರುತವಾಗಿದೆ ಎಂದು ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರದ ಉಪನಿರ್ದೇಶಕ ಸಂಜಿಬ್ ಬಂದೋಪಾಧ್ಯಾಯ ತಿಳಿಸಿದ್ದಾರೆ.
ಯಾಸ್ ಈಗ ಪ್ರಸ್ತುತ ಒಡಿಶಾದ ಪ್ಯಾರಾದೀಪ್ದ ಆಗ್ನೇಯಕ್ಕೆ 540 ಕಿ.ಮೀ ಮತ್ತು ಪಶ್ಚಿಮ ಬಂಗಾಳದ ದಿಘಾದ ಆಗ್ನೇಯಕ್ಕೆ 630 ಕಿ.ಮೀ ದೂರದಲ್ಲಿದೆ ಮತ್ತು ಇದು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಹಾಗೆ ನಾಳೆ ವೇಳೆಗೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಹೇಳಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ಕಡಲಾಚೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಸಕಾಲದಲ್ಲಿ ಸ್ಥಳಾಂತರಿಸುವಂತೆ ಕರೆ ನೀಡಿದ್ದಾರೆ.