ತಿರುವನಂತಪುರಂ (ಕೇರಳ): ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡಿರುವ ಕಡಿಮೆ ಒತ್ತಡದಿಂದ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 12 ಗಂಟೆಗಳಲ್ಲಿ ‘ತೌಕ್ತೆ’ಹೆಸರಿನ ಚಂಡಮಾರುತ ರಚನೆ ಆಗಲಿದ್ದು, ಇದರ ಚಲನೆ ಕೇರಳದ ಕರಾವಳಿಗೆ ಸಮಾನಾಂತರವಾಗಿ ಉತ್ತರದ ಕಡೆಗೆ ಇದೆ. ಉತ್ತರ ಕೇರಳ ಮತ್ತು ಉತ್ತರ ಕರ್ನಾಟಕದ ನಡುವೆ ತಲುಪುವಾಗ ಸೈಕ್ಲೋನ್ ಚಂಡಮಾರುತವಾಗಿ ಬದಲಾಗುತ್ತದೆ.
ಸಮುದ್ರ ಪರಿಸ್ಥಿತಿಗಳನ್ನು ಪರಿಗಣಿಸಿ ಕೇರಳ ಕರಾವಳಿಯ ಎಲ್ಲ ಮೀನುಗಾರಿಕೆ ಚಟುವಟಿಕೆಗಳನ್ನು ಕೇರಳ ಸರ್ಕಾರ ನಿಲ್ಲಿಸಿದೆ. ಕೇರಳವು ಚಂಡಮಾರುತದ ನೇರ ಪಥದಲ್ಲಿ ಬರದಿದ್ದರೂ, ಕೇರಳದ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಮುನ್ಸೂಚನೆ ನೀಡಲಾಗಿದೆ.
ಚಂಡಮಾರುತ ತೀವ್ರಗೊಂಡ ನಂತರ ಗುಜರಾತ್ ಕಡೆಗೆ ಸಾಗುವಾಗ ಚಂಡಮಾರುತದ ಪಥವು ಕೇರಳ ಕರಾವಳಿಗೆ ಸಮಾನಾಂತರವಾಗಲಿದೆ. ಇನ್ನು ಈ ಚಂಡಮಾರುತದಿಂದ 24 ಗಂಟೆಗಳಲ್ಲಿ 204 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ.
ಕೇರಳದ ಒಂಬತ್ತು ಜಿಲ್ಲೆಗಳಲ್ಲಿ ಸಹ ಭಾರೀ ಗಾಳಿ ಬೀಸಲಿದೆ ಎಂದು ಐಎಂಡಿ ತಿಳಿಸಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯು ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಅಪ್ಪಳಿಸಬಹುದು ಎಂದು ತಿಳಿಸಲಾಗಿದೆ.
ತಿರುವನಂತಪುರಂ, ಕೊಲ್ಲಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಈವರೆಗೆ 87 ಜನರನ್ನು ಸ್ಥಳಾಂತರಿಸಿ ರಾಜ್ಯದ ನಾಲ್ಕು ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಭೂ ಕಂದಾಯ ಆಯುಕ್ತರು ಮಾಹಿತಿ ನೀಡಿದ್ದಾರೆ. ತಿರುವನಂತಪುರಂನಲ್ಲಿ 51 ಜನರನ್ನು ಸ್ಥಳಾಂತರಿಸಿ ಶಿಬಿರದಲ್ಲಿ ವಸತಿ ಕಲ್ಪಿಸಲಾಗಿದ್ದು, ಕೊಲ್ಲಂ ಶಿಬಿರದಲ್ಲಿ 24 ಜನರಿದ್ದಾರೆ. ಇಡುಕ್ಕಿಯಲ್ಲಿ ನಾಲ್ಕು ಮತ್ತು ಎರ್ನಾಕುಲಂ ವಿಪತ್ತು ಪರಿಹಾರ ಶಿಬಿರಗಳಲ್ಲಿ ಎಂಟು ಜನರಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲೂ ಈ ಚಂಡಮಾರುತ ತನ್ನ ಪ್ರಭಾವ ಬೀರಲಿದ್ದು, ಮಹಾರಾಷ್ಟ್ರ ಸರ್ಕಾರ ಕೂಡಾ ಮುನ್ನೆಚ್ಚರಿಕೆ ನೀಡಿದೆ.