ಚೆನ್ನೈ(ತಮಿಳುನಾಡು): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮಿಚೌಂಗ್ ಚಂಡಮಾರುತ ಆಂಧ್ರಪ್ರದೇಶದ ಮತ್ತು ತಮಿಳುನಾಡಿನಲ್ಲಿ ರುದ್ರನರ್ತನ ತೋರುತ್ತಿದೆ. ಚೆನ್ನೈನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐವರು ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಸೈಕ್ಲೋನ್ ತಡೆಗೆ ಕೇಂದ್ರ ಸರ್ಕಾರ ನೆರವು ನೀಡುವುದಾಗಿ ಹೇಳಿದೆ.
ಚೆನ್ನೈನಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಓರ್ವ ಮರ ಬಿದ್ದು ಸಾವಿಗೀಡಾಗಿದ್ದಾನೆ. ಬೇರೆಡೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಮಳೆ ನೀರು ಉಕ್ಕಿ ಹರಿಯುತ್ತಿರುವ ಕಾರಣ, 60 ರೈಲುಗಳು ಮತ್ತು 70 ವಿಮಾನಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನ ಕಾರಣ ಚೆನ್ನೈ ಏರ್‌ಫೀಲ್ಡ್ ಮಂಗಳವಾರ ಬೆಳಗ್ಗೆ 9 ಗಂಟೆಯವರೆಗೆ ಮುಚ್ಚಿರುತ್ತದೆ. ಆಗಮನ ಮತ್ತು ನಿರ್ಗಮನದ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಜನಜೀವನ ಅಸ್ತವ್ಯಸ್ತ: ಚಂಡಮಾರುತದಿಂದಾಗಿ ಚೆನ್ನೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಶೇಖರಣೆಗೊಂಡು ಪ್ರವಾಹದಂತಾಗಿದ್ದು, ರಸ್ತೆಗಳು ನದಿಯಂತಾಗಿವೆ.
ಚೆಂಗಳಪಟ್ಟು ಜಿಲ್ಲೆಯ ಪೆರುಂಗಳತ್ತೂರು ಪ್ರದೇಶದಲ್ಲಿ ಮಳೆ ನೀರು ತುಂಬಿ, ನದಿಯಲ್ಲಿದ್ದ ಮೊಸಳೆಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ಮೊಸಳೆಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಚೆನ್ನೈನ ಪಲ್ಲಿಕರನೈ, ಮೇಡವಕ್ಕಂ ಮುಂತಾದ ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಇದಲ್ಲದೆ ಈ ಪ್ರದೇಶದ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿದು ವಸತಿ ಪ್ರದೇಶಗಳಿಗಳಲ್ಲಿ ತುಂಬಿ ಹರಿಯುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಲ್ಲಿಕರಣೈ ಪ್ರದೇಶದ ಖಾಸಗಿ ಅಪಾರ್ಟ್ಮೆಂಟ್ ಕಟ್ಟಡಗಳ ಕೆಳಗೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಲಕ್ಷಾಂತರ ಮೌಲ್ಯದ ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯವನ್ನು ಅಪಾರ್ಟ್ಮೆಂಟ್ನಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದವರು 8 ತಂಡಗಳಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್ಮೆಂಟ್ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ. ಹರಿಯುವ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾರುಗಳನ್ನು ವಾಪಸ್ ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿರಂತರ ಮಳೆಯಾಗುತ್ತಿರುವ ಕಾರಣ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿಲ್ದಾಣದಿಂದ ಹೊರಡುವ 70 ವಿಮಾನಗಳ ಸೇವೆಯನ್ನು ರದ್ಉಗೊಳಿಸಲಾಗಿದೆ. ಅತಿಯಾದ ಮಳೆಯಿಂದ ವಿಮಾನ ನಿಲ್ದಾಣದ ರನ್ವೇ ಹಾಗೂ ಟಾರ್ಮ್ಯಾಕ್ಗಳು ಕೂಡ ಜಲಾವೃತಗೊಂಡಿವೆ ಎಂದು ಮೂಲಗಳು ತಿಳಿಸಿವೆ. ವಿಮಾನ ಮಾತ್ರವಲ್ಲದೆ ರೈಲು ಸೇವೆಗಳನ್ನೂ ವಿಳಂಬ ಹಾಗೂ ರದ್ದುಗೊಳಿಸಲಾಗಿದೆ. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಕೊಯಮತ್ತೂರು, ಮೈಸೂರು ಸೇರಿದಂತೆ ಹಲವು ಸ್ಥಳಗಳಿಗೆ ತೆರಳುವ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಮಿಚೌಂಗ್ ಚಂಡಮಾರುತದ ಪ್ರಭಾವದಿಂದಾಗಿ ಚೆನ್ನೈ ಮತ್ತು ಸಮೀಪದ ಚೆಂಗಲ್ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಭಾನುವಾರ ತಡರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ನಗರದ 14 ಸುರಂಗಮಾರ್ಗಗಳು ಮುಳುಗಡೆಯಾಗಿವೆ. 11 ಕಡೆ ಬುಡಸಮೇತ ಮರಗಳು ಧರೆಗುರುಳಿವೆ. ನಗರದ ವೆಲಚೇರಿಯಲ್ಲಿ ಭೂಮಿಯ ಒಂದು ಭಾಗ ಕುಸಿದು ಹೊಂಡದಂತಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಿಚೌಂಗ್ ಚಂಡಮಾರುತ: ಚೆನ್ನೈನ ಹಲವು ಪ್ರದೇಶಗಳು ಜಲಾವೃತ-ವಿಡಿಯೋ