ಆಂಧ್ರಪ್ರದೇಶ/ಒಡಿಶಾ: ಗುಲಾಬ್ ಚಂಡಮಾರುತದಿಂದ ತತ್ತರಿಸಿ ಹೋಗಿದ್ದ ಆಂಧ್ರಪ್ರದೇಶದ ಶ್ರೀಕಾಕುಳಂ ಹಾಗೂ ವಿಜಯನಗರಂ ಜಿಲ್ಲೆಗಳಿಗೆ ಇದೀಗ ಜವಾದ್ ಚಂಡಮಾರುತದ ಭೀತಿ ಎದುರಾಗಿದೆ.
ಅಂಡಮಾನ್ ಸಮುದ್ರದಲ್ಲಿ ಸೃಷ್ಟಿಯಾಗಿರುವ ಜವಾದ್ ಚಂಡಮಾರುತ ವಾಯುವ್ಯ ದಿಕ್ಕಿನತ್ತ ಹೆಚ್ಚು ವೇಗವಾಗಿ ಸಾಗುತ್ತಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಬಂದು ನಾಳೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಆಂಧ್ರಪ್ರದೇಶದ ಶ್ರೀಕಾಕುಲಂ ಹಾಗೂ ವಿಜಯನಗರಂದಲ್ಲಿ ಈ ಸೈಕ್ಲೋನ್ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ನಾಳೆ ಗಂಟೆಗೆ 90 ಕಿ.ಮೀ ವೇಗದಲ್ಲಿ ಬರುವ ಸೈಕ್ಲೋನ್‌ನಿಂದ ಭಾರಿ ಮಳೆಯಾಗಿ ಈ ಪ್ರದೇಶಗಳಲ್ಲಿ ಹೆಚ್ಚು ಹಾನಿ ಉಂಟಾಗಬಹುದು ಎಂದು ಹವಾಮಾನ ಅಧಿಕಾರಿಗಳು ಅಂದಾಜಿಸಿದ್ದಾರೆ.
ಇಂದಿನಿಂದ ಡಿ. 5ರ ನಡುವೆ ಸ್ಲೈಕೋನ್ ಪ್ರಭಾವ ಹೆಚ್ಚಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಪ್ರಭಾವ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಂದಾಯ, ಮೀನುಗಾರಿಕೆ ಮತ್ತು ನೀರಾವರಿ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಡಿಶಾ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್
ಜವಾದ್ ಚಂಡಮಾರುತ ಒಡಿಶಾದ ಕರಾವಳಿಗೂ ನಾಳೆ ಅಪ್ಪಳಿಸುವ ಸಾಧ್ಯತೆ ಇದ್ದು, ಈಗಾಗಲೇ ಪುರಿ ಸೇರಿದಂತೆ ಹಲ ಕಡೆ ಅಲರ್ಟ್ ಘೋಷಿಸಲಾಗಿದೆ. ಗೋಪಾಲಪುರದಿಂದ 40 ಕಿ.ಮೀ ಹಾಗೂ ಪಾರಾದೀಪ್‌ನಿಂದ 760 ಕಿಮೀ ದೂರದಲ್ಲಿ ಸೈಕ್ಲೋನ್ ಇದ್ದು, ಈಶಾನ್ಯಕ್ಕೆ ಚಲಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಜವಾದ್ ಚಂಡಮಾರುತ ಹಿನ್ನೆಲೆ ರೈಲ್ವೆ ಸೇವೆ ತಾತ್ಕಾಲಿಕ ರದ್ದು: ಇಲ್ಲಿದೆ ಮಾಹಿತಿ