ಹೈದರಾಬಾದ್: 2020ರಲ್ಲಿ ನಗರದಲ್ಲಿ ನಡೆದ ಒಟ್ಟಾರೆ ಅಪರಾಧ ಪ್ರಮಾಣ ಶೇ. 10 ರಷ್ಟು ಕಡಿಮೆಯಾಗಿದೆ. ಆದರೆ 2020 ರಲ್ಲಿ ಸೈಬರ್ ಅಪರಾಧವು ಶೇ.75 ರಷ್ಟು ಹೆಚ್ಚಾಗಿದೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಹಲವು ಅಪರಾಧ ವಿಭಾಗಗಳಲ್ಲಿ ಕುಸಿತ ಕಂಡುಬಂದರೂ, ಸೈಬರ್ ಅಪರಾಧ ಪ್ರಮಾಣ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಮುತ್ತಿನ ನಗರಿಯಲ್ಲಿ 2019ರಲ್ಲಿ ಒಟ್ಟು 1,400 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2020 ರಲ್ಲಿ 2,456 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ.
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ವರ್ಕ್ ಫ್ರಂ ಹೋಮ್ ಮಾಡುವವರ ಹಾಗೂ ಮನೆಯಲ್ಲೇ ಇರುವವರ ಸಂಖ್ಯೆ ಹೆಚ್ಚಿದ್ದು, ಕೊರೊನಾ ಕಾಲದಲ್ಲಿಯೇ ಜನರು ಹೆಚ್ಚಾಗಿ ಇಂಟರ್ನೆಟ್ ಬಳಸುತ್ತಿರುವುದು ಕಂಡು ಬಂದಿದೆ ಎಂದು ಅಪರಾಧ ಮತ್ತು ಎಸ್ಐಟಿ ವಿಭಾಗದ ಹೆಚ್ಚುವರಿ ಆಯುಕ್ತ ಶಿಖಾ ಗೋಯೆಲ್ ತಿಳಿಸಿದ್ದಾರೆ.
ಸಾಂಪ್ರದಾಯಿಕ ಅಪರಾಧ (conventional crime)ಗಳನ್ನು ಬಿಟ್ಟು, ಅಪರಾಧಿಗಳು ಸೈಬರ್ ಅಪರಾಧಕ್ಕೆ ಕೈ ಹಾಕುತ್ತಿರುವುದು ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಲು ಮತ್ತೊಂದು ಕಾರಣ ಎಂದು ಗೋಯೆಲ್ ಹೇಳಿದ್ದಾರೆ.
ಒಟ್ಟಾರೆ ಅಪರಾಧ ಅಂಕಿಅಂಶಗಳನ್ನು ನೋಡುವುದಾದರೆ ಹೈದ್ರಾಬಾದ್ನಲ್ಲಿ 2020 ರಲ್ಲಿ 22,641 ಪ್ರಕರಣಗಳು ದಾಖಲಾಗಿದ್ದು, 2019ರಲ್ಲಿ 25,187 ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಇನ್ನು ಮಕ್ಕಳ ಮೇಲೆ ನಡೆಯುವ ಅಪರಾಧ ಪ್ರಕರಣಗಳು ಶೇ. 35 ರಷ್ಟು ಕಡಿಮೆಯಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಕಳೆದ ವರ್ಷ 339 ಪೊಕ್ಸೊ ಪ್ರಕರಣಗಳು ದಾಖಲಾಗಿದ್ದರೆ, 2020 ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಒಟ್ಟು 221 ಪ್ರಕರಣಗಳು ದಾಖಲಾಗಿವೆ.
2020 ರಲ್ಲಿ 1908 ಕೇಸ್ಗಳು ಮಹಿಳೆ ವಿರುದ್ಧ ನಡೆದ ಅಪರಾಧ ಪ್ರಕರಣಗಳಾಗಿದ್ದು, 2019 ರಲ್ಲಿ ದಾಖಲಾಗಿದ್ದ 2,354 ಪ್ರಕರಣಗಳಿಗೆ ಹೋಲಿಸಿದ್ರೆ, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಶೇ. 19 ರಷ್ಟು ಕಡಿಮೆಯಾಗಿವೆ. ಆಸ್ತಿ ಸಂಬಂಧದ ಅಪರಾಧ ಪ್ರಕರಣಗಳು ಶೇ. 27 ರಷ್ಟು ಕಡಿಮೆಯಾಗಿವೆ. ಹಾಗೆಯೇ ದೈಹಿಕ ಹಲ್ಲೆ ಪ್ರಕರಣಗಳು ಶೇ. 26 ರಷ್ಟು ಕಡಿಮೆಯಾಗಿವೆ.
ಕೊಲೆ, ಅತ್ಯಾಚಾರ, ದೌರ್ಜನ್ಯ, ಹತ್ಯೆ, ಒಡವೆ ಕಳ್ಳತನ, ಮನೆಗಳ್ಳತನ, ದರೋಡೆಯಂತಹ ಅಪರಾಧ ಪ್ರಕರಣಗಳು ಕೂಡ ಕುಸಿತ ಕಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿರಂತರವಾಗಿ ಕ್ರಿಮಿನಲ್ಗಳ ಟ್ರ್ಯಾಕಿಂಗ್, ಪೊಲೀಸ್ ಗಸ್ತು ಮತ್ತು ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ ಈ ವರ್ಷ ಕಡಿಮೆಯಾಗಿದೆ. 2019 ರಲ್ಲಿ 271 ಮಂದಿ ವಾಹನ ಚಾಲಕರು ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ರೆ 2020 ರಲ್ಲಿ 237 ವಾಹನ ಚಾಲಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ 68 ಪಾದಚಾರಿಗಳು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಅಂದರೆ 2019 ರಲ್ಲಿ 108 ಜನ ಪಾದಚಾರಿಗಳು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ರು.
ಇನ್ನು ಇದೇ ವೇಳೆ 3,000 ಕ್ಕೂ ಹೆಚ್ಚು ಕರ್ತವ್ಯನಿರತ ಪೊಲೀಸರಿಗೆ ಕೋವಿಡ್ ಸೋಂಕು ತಗುಲಿದ್ದು, ಅವರಲ್ಲಿ 39 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.