ನವದೆಹಲಿ: 2021ರಲ್ಲಿ ಪ್ರಪಂಚದಲ್ಲೇ ಸೈಬರ್ ಅಪರಾಧಿಗಳಿಂದ ಅತಿ ಹೆಚ್ಚು ದಾಳಿಗೊಳಗಾದ ಪ್ರದೇಶ ಎಂದರೆ ಅದು ಏಷ್ಯಾ. ಜಾಗತಿಕವಾಗಿ ಪ್ರತಿ ನಾಲ್ಕು ದಾಳಿಗಳಲ್ಲಿ ಒಂದನ್ನು ಏಷ್ಯಾ ಹೊಂದಿದೆ. ಏಷ್ಯಾದಲ್ಲೇ ಅತಿ ಹೆಚ್ಚು ಸರ್ವರ್ ಪ್ರವೇಶ ಮತ್ತು ರಾನ್ಸಮ್‌ವೇರ್ ದಾಳಿಯನ್ನು ಅನುಭವಿಸಿದ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂದು ವರದಿಯೊಂದು ತೋರಿಸಿದೆ.
ಏಷ್ಯಾದಲ್ಲಿ 2021ರಲ್ಲಿ ಆದ ಸೈಬರ್ ದಾಳಿಗಳಲ್ಲಿ ಶೇ.20ರಷ್ಟು ಸರ್ವರ್ ಪ್ರವೇಶ ದಾಳಿಗಳು, ಶೇ.11ರಷ್ಟು ರಾನ್ಸಮ್‌ವೇರ್ ದಾಳಿಯಾಗಿದ್ದು, ಶೇ.10ರಷ್ಟು ಡೇಟಾ ಕಳ್ಳತನವಾಗಿದೆ ಹಾಗೂ ರಿಮೋಟ್ ಆಕ್ಸೆಸ್ ಟ್ರೋಜನ್‌ಗಳು ಮತ್ತು ಆಯ್ಡ್‌ವೇರ್ ತಲಾ 9 ಪ್ರತಿಶತದಷ್ಟಿದೆ.
ನೆಟ್‌ವರ್ಕ್‌ಗಳಿಗೆ ಆರಂಭಿಕ ಪ್ರವೇಶವನ್ನು ಪಡೆಯಲು ಬ್ರೂಟ್ ಫೋರ್ಸ್ ದಾಳಿ ಶೇ. 7ರಷ್ಟಿದೆ. ಕದ್ದ ದಾಖಲೆಗಳನ್ನು ಬಳಸಿಕೊಳ್ಳಲು ನಡೆಸುವ ದಾಳಿ ಶೇ. 7ರಷ್ಟಿದೆ. ಎಂದು ಐಬಿಎಂನ ಎಕ್ಸ್-ಫೋರ್ಸ್ ಥ್ರೆಟ್ ಇಂಟೆಲಿಜೆನ್ಸ್ ತಂಡದ ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: ಐಫೋನ್ 14 ಪ್ರೊ ಮೊಬೈಲ್ನಲ್ಲಿ 8 ಜಿಬಿ RAM ಅಳವಡಿಕೆ: ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್22 ಮಾದರಿ
ಏಷ್ಯಾದಲ್ಲಿ ಅತಿ ಹೆಚ್ಚು ದಾಳಿಗೊಳಗಾದ ದೇಶಗಳೆಂದರೆ ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ. ಸೈಬರ್ ಅಪರಾಧಿಗಳು ಹೆಚ್ಚು ಸುಲಿಗೆ ಮಾಡಲು ಎಲ್ಲಾ ಕ್ಷೇತ್ರಗಳಿಗಿಂತಲೂ ಉತ್ಪಾದನಾ ಕ್ಷೇತ್ರಗಳ ಸಂಸ್ಥೆಗಳ ಮೇಲೆ ರಾನ್ಸಮ್‌ವೇರ್ ದಾಳಿ ಮಾಡಿದ್ದಾರೆ ಎಂದು ಐಬಿಎಂ ತಂಡ ತಿಳಿಸಿದೆ.