ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯ ಕಸ್ಟಮ್ಸ್ ಅಧಿಕಾರಿಗಳು 136 ಕೋಟಿ ರೂ.ಗಳ ಹೆರಾಯಿನ್ ಹೊಂದಿರುವ ಇಬ್ಬರು ಅಫ್ಘಾನ್ ನಾಗರಿಕರನ್ನು ಬಂಧಿಸಿದ್ದಾರೆ. ದುಬೈನಿಂದ ಎಮಿರೇಟ್ಸ್ ಏರ್ವೇಸ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದು, ಟರ್ಮಿನಲ್ 3 ರಲ್ಲಿ ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆಯ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ.
ಸುಮಾರು 136 ಕೋಟಿ ರೂ.ಗಳ ಮೌಲ್ಯದ ಸುಮಾರು 19.5 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಜಂಟಿ ಆಯುಕ್ತ ಶೌಕತ್ ಅಲಿ ನೆರ್ವಿ ತಿಳಿಸಿದ್ದಾರೆ. ಗ್ರೀನ್ ಚಾನೆಲ್ ಕೌಂಟರ್ ದಾಟಿ ಬಹುತೇಕ ನಿರ್ಗಮನ ಗೇಟ್ ತಲುಪಿದ ನಂತರ ಕಸ್ಟಮ್ಸ್ ಅಧಿಕಾರಿಗಳು ಅಫ್ಘನ್ನರನ್ನು ತಡೆದಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ನ್ನು ತಪಾಸಣೆ ಮಾಡುವಾಗ ಕಪ್ಪು ಬಣ್ಣದ ದ್ರವ ಪದಾರ್ಥಗಳನ್ನು ಹೊಂದಿರುವ ಶಾಂಪೂಗಳ ಬಾಟಲಿಗಳು ಕಂಡು ಬಂದಿದೆ. ಈ ವೇಳೆ ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು ಟರ್ಮಿನಲ್ 3ರ ಬಳಿ ಅವರನ್ನು ತಡೆದು ಮತ್ತೆ ವಿಚಾರಣೆ ನಡೆಸಿದ್ದಾರೆ. ಈ ಬಳಿಕ ಹೆರಾಯಿನ್ ಇರುವುದು ದೃಢಪಟ್ಟಿದೆ.
ಸದ್ಯ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ಇಬ್ಬರನ್ನೂ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.