ಚೆನ್ನೈ: ವೆಸ್ಟ್‌ಇಂಡೀಸ್‌ನ ಲೆಜೆಂಡರಿ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನು 2023 ರ ಸೀಸನ್ ಆರಂಭಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. 2008 ರಲ್ಲಿ ಟೂರ್ನಮೆಂಟ್‌ನ ಆರಂಭದಿಂದಲೂ ಬ್ರಾವೋ ಐಪಿಎಲ್‌ನಲ್ಲಿ ಆಡಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಒಂದು ವರ್ಷ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಲಕ್ಷ್ಮೀಪತಿ ಬಾಲಾಜಿ ಅವರ ಸ್ಥಾನವನ್ನು ಬ್ರಾವೊ ತುಂಬಲಿದ್ದಾರೆ.
ನಾನು ಈ ಹೊಸ ಪ್ರಯಾಣಕ್ಕಾಗಿ ಎದುರು ನೋಡುತ್ತಿದ್ದೇನೆ. ನನ್ನ ಆಟದ ದಿನಗಳು ಸಂಪೂರ್ಣವಾಗಿ ಮುಗಿದ ನಂತರ ನಾನೇನು ಮಾಡಬೇಕೆಂಬುದನ್ನು ಎದುರು ನೋಡುತ್ತಿರುವೆ. ಬೌಲರ್‌ಗಳೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇನೆ ಮತ್ತು ಇದಕ್ಕಾಗಿ ನಾನು ಉತ್ಸುಕನಾಗಿದ್ದೇನೆ ಎಂದು ಬ್ರಾವೋ ಹೇಳಿದ್ದನ್ನು ಸಿಎಸ್‌ಕೆ ಪ್ರಕಟಣೆ ನೀಡಿದೆ.
ಆಟಗಾರನಿಂದ ತರಬೇತುದಾರನಾಗುವ ಪ್ರಕ್ರಿಯೆಯಲ್ಲಿ ನಾನು ಹೆಚ್ಚು ಹೊಂದಿಕೊಳ್ಳಬೇಕಾಗಬಹುದು ಎಂದು ನಾನು ಭಾವಿಸುವುದಿಲ್ಲ. ನಾನು ಆಡುತ್ತಿದ್ದಾಗ ಯಾವಾಗಲೂ ಬೌಲರ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೆ ಮತ್ತು ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಇರಲು ಯೋಜನೆಗಳು ಮತ್ತು ಆಲೋಚನೆಗಳನ್ನು ಮುಂದಿಡುತ್ತಿದ್ದೆ.
ಒಂದೇ ವ್ಯತ್ಯಾಸವೆಂದರೆ ನಾನು ಇನ್ನು ಮುಂದೆ ಮಿಡ್ - ಆನ್ ಅಥವಾ ಮಿಡ್-ಆಫ್‌ನಲ್ಲಿ ನಿಲ್ಲುವುದಿಲ್ಲ. ಐಪಿಎಲ್ ಇತಿಹಾಸದಲ್ಲಿ ನಾನು ಪ್ರಮುಖ ವಿಕೆಟ್ ಟೇಕರ್ ಆಗುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ, ಐಪಿಎಲ್ ಇತಿಹಾಸದ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ಬ್ರಾವೊ ಹೇಳಿದ್ದಾರೆ.
ಬ್ರಾವೋ 161 ಪಂದ್ಯಗಳಿಂದ 183 ವಿಕೆಟ್‌ಗಳೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಲ್ ರೌಂಡರ್ ಆಗಿರುವ ಇವರು 130 ರ ಸ್ಟ್ರೈಕ್ ರೇಟ್‌ನಲ್ಲಿ 1560 ರನ್ ಗಳಿಸಿದ್ದಾರೆ. ಸೂಪರ್ ಕಿಂಗ್ಸ್ ನ ಅನೇಕ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಐಪಿಎಲ್‌ನಲ್ಲಿ ಅದ್ಭುತವಾದ ವೃತ್ತಿಜೀವನಕ್ಕಾಗಿ ಡ್ವೇನ್ ಬ್ರಾವೊ ಅವರಿಗೆ ಅಭಿನಂದನೆಗಳು. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಸೂಪರ್ ಕಿಂಗ್ಸ್ ಕುಟುಂಬದ ನಿರ್ಣಾಯಕ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದ್ದಾರೆ.
ಐಪಿಎಲ್ ಋತುವಿನಲ್ಲಿ ಎರಡು ಬಾರಿ (2013 ಮತ್ತು 2015) ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಆಟಗಾರ. ಬ್ರಾವೋ ಸಿಎಸ್‌ಕೆ ಪರ 144 ಪಂದ್ಯಗಳನ್ನು ಆಡಿದ್ದು, 168 ವಿಕೆಟ್ ಪಡೆದು 1556 ರನ್ ಗಳಿಸಿದ್ದಾರೆ.
ಇದನ್ನೂ ಓದಿ: T20 Cricket: ಪೊಲಾರ್ಡ್ ಹಿಂದಿಕ್ಕಿ ನೂತನ ಮೈಲಿಗಲ್ಲು ತಲುಪಿದ ಡ್ವೇನ್ ಬ್ರಾವೋ