ತಿರುನಲ್ವೇಲಿ (ತಮಿಳುನಾಡು): ರಸ್ತೆ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದ ಪ್ರಿಯಕರನನ್ನು ಮದುವೆಯಾದ ಯುವತಿಯನ್ನು ಮನೆಯಿಂದ ಎಳೆದೊಯ್ದು ಗಂಡನಿಂದ ದೂರ ಮಾಡಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ವಲ್ಲಿಯೂರ್ ಬಳಿಯ ಕೇಶವನೇರಿ ನಿವಾಸಿ ಪ್ರಕಾಶ್ ಹಾಗೂ ವಲ್ಲಿಯಮ್ಮಾಳ್ಪುರಂನ ದಿವ್ಯಾ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಚೆನ್ನೈನ ಖಾಸಗಿ ಕಂಪನಿಯಲ್ಲಿ ಪ್ರಕಾಶ್ ಕೆಲಸ ಮಾಡುತ್ತಿದ್ದರು. ಮೇಲಾಗಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡು ಮನೆಯವರ ನಡುವೆ ಕಲಹ ಇರಲಿಲ್ಲ.
ಆದರೆ, 2 ವರ್ಷಗಳ ಹಿಂದೆ ಪ್ರಕಾಶ್ ಅವರು ಚೆನ್ನೈನಿಂದ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಇದರಲ್ಲಿ ಬೆನ್ನಿಗೆ ಹಾನಿಯಾಗಿ ಅವರ ಎರಡೂ ಕಾಲುಗಳು ಸ್ವಾಧೀನವನ್ನೇ ಕಳೆದುಕೊಂಡಿದ್ದಾರೆ. ಪ್ರಕಾಶ್ ನಡೆಯಲು ಸಾಧ್ಯವಾಗದಿದ್ದರೂ, ವಿದ್ಯಾ ಜೊತೆ ಪ್ರೀತಿ ಯಾವುದೇ ತೊಂದರೆಗಳಿಲ್ಲದೆ ಮುಂದುವರೆದಿತ್ತು.
ಇತ್ತೀಚೆಗೆ ದಿವ್ಯಾ ಪೋಷಕರು ಇವರ ಪ್ರೀತಿಗೆ ಏಕಾಏಕಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೂ ಸೆ.20ರಂದು ಪ್ರಕಾಶ್ ಮನೆಯಲ್ಲಿ ಅವರ ಕುಟುಂಬದವರ ಸಮ್ಮುಖದಲ್ಲಿ ವಿದ್ಯಾ ವಿವಾಹವಾಗಿದ್ದರು. ಇದರಿಂದ ಕೋಪಗೊಂಡ ದಿವ್ಯಾ ಪೋಷಕರಿಗೆ ಸೆ.29ರಂದು ಪ್ರಕಾಶ್ ಮನೆಗೆ ತೆರಳಿ ಜಗಳವಾಡಿದ್ದಾರೆ. ಜೊತೆಗೆ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ದಿವ್ಯಾಳನ್ನು ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಇತ್ತ, ವಲ್ಲಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕಾಶ್ ವಳ್ಳಿಯೂರು ಪೊಲೀಸ್ ಠಾಣೆಗೆ ಬಂದು ದಿವ್ಯಾ ಪೋಷಕರು ವಿರುದ್ಧ ದೂರು ದಾಖಲಿಸಿದ್ದಾರೆ. ದಿವ್ಯಾ ಪೋಷಕರು ನಮ್ಮ ಮನೆಗೆ ಬಂದು ಜಗಳವಾಡಿ ಆಕೆಯನ್ನು ಮನೆಯಿಂದ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಪತಿ ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ ಮಹಿಳೆ: ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೂ ಕಚ್ಚಿತು