ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಮಹತ್ವದ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಉಗ್ರರ ದಾಳಿಯನ್ನು ಎದುರಿಸುವ ಉದ್ದೇಶದಿಂದ ಅರೆಸೇನಾ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ನಕ್ಸಲ್ ವಿರೋಧಿ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಅನ್ನು ಶೀಘ್ರದಲ್ಲೇ ಕಾಶ್ಮೀರದಲ್ಲಿ ನಿಯೋಜಿಸಲು ಸೇನೆ ಮುಂದಾಗಿದೆ. ಕೋಬ್ರಾ ಕಮಾಂಡೋಗಳ ತಂಡವು ಕೆಲವು ತಿಂಗಳುಗಳಿಂದ ಶ್ರೀನಗರಕ್ಕೆ ಆಗಮಿಸಿದ್ದು, ಪ್ರಸ್ತುತ ಶ್ರೀನಗರದ ಹೊರ ವಲಯದಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ತಂಡ ತರಬೇತಿ ಪಡೆಯುತ್ತಿದೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ತರಬೇತಿ ಪಡೆದಿರುವ ಎಲೈಟ್ ಕೋಬ್ರಾ ಕಮಾಂಡೋಗಳು ಇಲ್ಲಿಯ ಪ್ರಿ ಇಂಡಕ್ಷನ್ ತರಬೇತಿ ಶಿಬಿರದಲ್ಲಿ ನಗರ ಮತ್ತು ಗ್ರಾಮೀಣ ಕಾರ್ಯಾಚರಣೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಾಡಿನಲ್ಲಿನ ಕಾರ್ಯಾಚರಣೆಯ ಕಾರ್ಯವಿಧಾನಗಳು, ನಗರ ಮತ್ತು ಗ್ರಾಮೀಣ ಕಾರ್ಯಾಚರಣೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ" ಎಂದು ಅಧಿಕಾರಿ ಹೇಳಿದ್ದಾರೆ. "ಕೋಬ್ರಾ ಕಮಾಂಡೋಗಳಿಗೆ ನಗರ ಮತ್ತು ಗ್ರಾಮೀಣ ಕಾರ್ಯಾಚರಣೆಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಮತ್ತು ನೆಲದ ಮೇಲೆ ಕೆಲಸ ಮಾಡುವಾಗ ಸ್ಥಳೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸಲು ತರಬೇತಿ ನೀಡಲಾಗುತ್ತಿದೆ" ಎಂದು ಅವರು ಹೇಳಿದರು.
"ಅಲ್ಲಿ ಚಳಿಗಾಲದಲ್ಲಿ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗುವುದರಿಂದ, ಕಾಶ್ಮೀರದ ಹವಾಮಾನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಕೋಬ್ರಾ ಕಮಾಂಡೋಗಳಿಗೆ ಕಂಡೀಷನಿಂಗ್ ಶಿಬಿರವನ್ನು ಸಹ ಸ್ಥಾಪಿಸಲಾಗುತ್ತಿದೆ. ಅವರು ಸಾಮಾನ್ಯವಾಗಿ ಬಿಸಿ ವಾತಾವರಣ ಹೊಂದಿರುವ ನಕ್ಸಲ್ ಪ್ರದೇಶಗಳಿಂದ ಬರುವುದರಿಂದ, ಕಂಡೀಷನಿಂಗ್ ಶಿಬಿರವು ಅವರನ್ನು ಕಾಶ್ಮೀರದ ಹವಾಮಾನಕ್ಕೆ ಒಗ್ಗಿಸುತ್ತದೆ.' ಎಂದು ಅಧಿಕಾರಿ ತಿಳಿಸಿದರು.
ಎಲ್ಲ ರೀತಿಯ ತರಬೇತಿಗಳ ನಂತರ ಸಿಆರ್‌ಪಿಎಫ್ ಕೋಬ್ರಾ ಕಮಾಂಡೊಗಳನ್ನು ದಕ್ಷಿಣ ಮತ್ತು ಉತ್ತರ ಕಾಶ್ಮೀರದಲ್ಲಿ ನಿಯೋಜನೆ ಮಾಡಬಹುದು ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ರೀತಿಯ ತರಬೇತಿಗಳು ಮಾತ್ರವಲ್ಲದೇ ಸಿಆರ್‌ಪಿಎಫ್ ಕೋಬ್ರಾ ಕಮಾಂಡೊಗಳಿಗೆ ಅಲ್ಲಿನ ಸ್ಥಳೀಯ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮೂಲ ಉಪಭಾಷೆ (ಕಾಶ್ಮೀರಿ) ಯನ್ನೂ ಕಲಿಸಲಾಗುತ್ತಿದೆ. ಕಣಿವೆಯಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್ ಸಿಬ್ಬಂದಿಗೆ ಕಾಶ್ಮೀರಿ ಭಾಷೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಸ್ಥಳೀಯ ಜನರೊಂದಿಗೆ ಮತ್ತಷ್ಟು ಸಂವಹನ ನಡೆಸಲು ಪ್ರೇರೇಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಒಳ ನುಸುಳಲು ಯತ್ನ.. ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ: ಮುಂದುವರಿದ ಕಾರ್ಯಾಚರಣೆ