ನವದೆಹಲಿ : ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳ ತೆರವು ಬಳಿಕ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಸ್ಕ್ ಇಲ್ಲದೆ, ದೈಹಿಕ ಅಂತರವಿಲ್ಲದೆ ತಿರುಗಾಡುವ ದೃಶ್ಯ ಭಯದ ಭಾವನೆ ಮೂಡಿಸುತ್ತಿವೆ. ಒಂದು ಸಣ್ಣ ತಪ್ಪಿಗೂ ನಾವು ಭಾರಿ ಬೆಲೆ ತೆರಬೇಕಾಗುತ್ತದೆ. ದಯವಿಟ್ಟು ಎಚ್ಚರವಹಿಸಿ ಎಂದು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ನಮೋ ಕಳವಳ
ಕಳೆದ ಕೆಲ ದಿನಗಳಿಂದ ಜನಸಂದಣಿ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ, ದೈಹಿಕ ಅಂತರವಿಲ್ಲದೆ ಜನತೆ ತಿರುಗಾಡುತ್ತಿರುವ ಫೋಟೋ, ವಿಡಿಯೋಗಳನ್ನು ನಾವು ನೋಡುತ್ತಿದ್ದೇವೆ ಎಂದು ನೂತನ ಸಚಿವರ ಜತೆ ನಡೆಸಿದ ಸಭೆಯಲ್ಲಿ ಮೋದಿ ಹೇಳಿದ್ದಾರೆ. ಈ ಬೆಳವಣಿಗೆ ಆಹ್ಲಾದಕರವಲ್ಲ. ಉತ್ತರಾಖಂಡದ ಮುಸ್ಸೂರಿಯ ಕೆಂಪ್ಟಿ ಜಲಪಾದಲ್ಲಿ ನೂರಾರು ಪ್ರವಾಸಿಗರು ಸ್ನಾನ ಮಾಡುತ್ತಿರುವ ವಿಡಿಯೋ ನೋಡಿದ ಅವರು, ಈ ಕಳವಳ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ ಇನ್ನೂ ಮುಗಿದಿಲ್ಲ’
ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಯಾರೂ ಅಜಾಗರೂಕತೆಯಿಂದ ಇರಬಾರದು, ಒಂದು ಸಣ್ಣ ತಪ್ಪು ಕೂಡ ತೀವ್ರ ಪರಿಣಾಮ ಬೀರುತ್ತದೆ. ಕೋವಿಡ್ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ನೂತನ ಮಂತ್ರಿಗಳಿಗೆ ಎಚ್ಚರಿಸಿದ್ದಾರೆ. ಕೋವಿಡ್ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
‘ಮುನ್ನೆಚ್ಚರಿಕೆ ವಹಿಸಿ’
ಇತರೆ ರಾಷ್ಟ್ರಗಳಲ್ಲಿ ಕೋವಿಡ್ ಉಲ್ಭಣಗೊಳ್ಳುತ್ತಿದ್ದು, ವೈರಸ್ ರೂಪಾಂತರಗೊಳ್ಳುತ್ತಿದೆ. ನಮ್ಮ ಗುರಿ ಜನರಲ್ಲಿ ಭಯ ಹುಟ್ಟು ಹಾಕುವುದಲ್ಲ. ಸಾಧ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ವೈರಸ್ ನಿಯಂತ್ರಿಸುವುದು ಎಂದು ಸಚಿವರಿಗೆ ಮೋದಿ ಕರೆ ನೀಡಿದರು.
ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ
ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ನಿರಂತರವಾಗಿ ಹೆಚ್ಚುತ್ತಿದೆ. ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮಾಹಿತಿಯ ಪ್ರಕಾರ ಒಂದು ದಿನಕ್ಕೆ 12 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ನಿತ್ಯ 8 ರಿಂದ 9 ಸಾವಿರ ಕೋವಿಡ್ ಕೇಸ್ ಪತ್ತೆಯಾಗುತ್ತಿವೆ. ಈವರೆಗೆ ದೇಶದಲ್ಲಿ ವೈರಸ್ಗೆ ಬಲಿಯಾಗಿರುವವರಲ್ಲಿ ಶೇ.30ಕ್ಕಿಂತ ಹೆಚ್ಚು ಮಹಾರಾಷ್ಟ್ರದವರೇ ಆಗಿದ್ದಾರೆ.
‘ಮೂರನೇ ಅಲೆ ಸನ್ನಿಹಿತ’
ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ. ಕೆಲವು ತಿಂಗಳುಗಳಲ್ಲಿಯೇ ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಈಗಾಗಲೇ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ರಾಮ್ವಿಲಾಸ್ ಪಾಸ್ವಾನ್ ಉತ್ತರಾಧಿಕಾರಿ ನಾನೇ : ಪಶುಪತಿ ಪರಾಸ್