ಹೈದರಾಬಾದ್(ತೆಲಂಗಾಣ): ಅಮೆರಿಕದ ತನಿಖಾ ಸಂಸ್ಥೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ (ಎಚ್‌ಎಸ್‌ಐ) ನೀಡಿದ ಮಾಹಿತಿಯ ಮೇರೆಗೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಯುವಕನನ್ನು ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈತ ಹಲವು ವರ್ಷಗಳಿಂದ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಮತ್ತು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮೆಹಬೂಬಾಬಾದ್ ಜಿಲ್ಲೆಯ ದಿವಾಪಲ್ಲಿ ಮೂಲದ ದೀಕ್ಷಿತ್ (24) ಬಂಧಿತ ಆರೋಪಿಯಾಗಿದ್ದು, ಹೈದರಾಬಾದ್ನ ರಾಮನಾಥಪುರದಲ್ಲಿ ಎಂಸಿಎ ಓದುತ್ತಿದ್ದಾನೆ. ಎರಡು ವರ್ಷಗಳ ಹಿಂದೆ, ಈತ ತನ್ನ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಇತರರು ಪೋಸ್ಟ್ ಮಾಡಿದ್ದ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್ಲೋಡ್ ಮಾಡಿ, ಅವುಗಳನ್ನು ತನ್ನ ಸ್ನೇಹಿತರೊಂದಿಗೆ ಸೇರಿ ವೀಕ್ಷಿಸುತ್ತಿದ್ದನು. ನಂತರ ವಿಡಿಯೋಗಳನ್ನು ಇತರ ವಾಟ್ಸ್ಆ್ಯಪ್ ಗುಂಪುಗಳೊಂದಿಗೆ ಹಂಚಿಕೊಳ್ಳುತ್ತಿದ್ದ.
ಈ ಕುರಿತು ಎಚ್‌ಎಸ್‌ಐ ಯುವಕನ ಫೋನ್ ಸಂಖ್ಯೆಯನ್ನು ಗುರುತಿಸಿ ದೆಹಲಿಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದೆ. ಅಲ್ಲಿನ ಪ್ರತಿನಿಧಿಗಳು ಸಿಬಿಐಗೆ ತಿಳಿಸಿದ್ದಾರೆ. ನಂತರ ಅವರು ತೆಲಂಗಾಣ ಸಿಐಡಿಗೆ ಮಾಹಿತಿ ನೀಡಿದ್ದಾರೆ. ಈ ಫೋನ್ ನಂಬರ್ ಆಧರಿಸಿ ಸಿಐಡಿ ಇನ್ಸ್ಪೆಕ್ಟರ್ ತಂಡ ತನಿಖೆ ಆರಂಭಿಸಿದಾಗ. ಐದು ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ಈತ ವಿಡಿಯೋಗಳನ್ನು ಸ್ವೀಕರಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತ ವರದಿಯನ್ನು ರಾಚಕೊಂಡ ಪೊಲೀಸ್ ಆಯುಕ್ತ ಡಿ.ಎಸ್.ಚೌಹಾಣ್ ಅವರಿಗೆ ನೀಡಲಾಗಿದೆ. ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.
ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲು( ಶಿವಮೊಗ್ಗ): ಕೆಲವು ತಿಂಗಳುಗಳ ಹಿಂದೆ, ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಇಬ್ಬರ ವಿರುದ್ಧ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಕ್ಕಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ಕುರಿತು ಅಮೆರಿಕದ ಸೈಬರ್ ಟಿಪ್ ಲೈನ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಶಿವಮೊಗ್ಗದ ಸಿಇಎನ್ ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕಿನ ತಲಾ ಒಬ್ಬರ ಮೇಲೆ ಕೇಸು ದಾಖಲಿಸಲಾಗಿತ್ತು.
ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಕಳುಹಿಸುವುದು ಮತ್ತು ವಿಡಿಯೋ ಮಾಡುವುದು ನಿಷೇಧಿತವಾಗಿದೆ. ಹೀಗಿದ್ದರೂ ಫೋಟೋಗಳನ್ನು ಅಪ್ಲೋಡ್ ಮಾಡುವುದನ್ನು ಮಾಡಿದರೆ ಅವರ ವಿರುದ್ಧ ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾಗಿದೆ.
ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್ ಹಾಗೂ ಅಪ್ಲೋಡ್ ಮಾಡುವವರ ಮೇಲೆ ಅಮೆರಿಕಾದ ಟಿಪ್ ಲೈನ್ ಎಂಬ ಸಂಸ್ಥೆಯು ಹದ್ದಿನ ಕಣ್ಣಿಟ್ಟು ಗಮನಿಸುತ್ತಿರುತ್ತದೆ. ಈ ಸಂಸ್ಥೆಯು ನೀಡಿದ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸರು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ, ಅದು ಸಾಬೀತಾದರೆ, ಕಾನೂನಿನಡಿ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ದಂಡವನ್ನು ವಿಧಿಸುವ ಅವಕಾಶವಿದೆ.
ಇದನ್ನೂ ಓದಿ: ಪತ್ನಿಯನ್ನ ತಾನೇ ಕೊಂದು ನೇಣಿಗೆ ಶರಣಾಗಿದ್ದಾಳೆಂದು ಕಥೆ ಕಟ್ಟಿದ್ದ ಪತಿ ಬಂಧನ: ತನಿಖೆ ಚುರುಕು