ಮುಜಾಫರ್‌ಪುರ (ಬಿಹಾರ): ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗುಂಡು ಹಾರಿಸಿದ ಬಳಿಕ ಹಂತಕರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಭೀಕರ ದೃಶ್ಯಗಳು ಸೆರೆಯಾಗಿದ್ದು, ಜನತೆಯನ್ನು ಬೆಚ್ಚಿ ಬೀಳಿಸುವಂತಿದೆ.
ಹತ್ಯೆಗೀಡಾದ ಮಹಿಳೆಯನ್ನು ಸಾಜಿದಾ ಆಫ್ರಿನ್ (35) ಎಂದು ಗುರುತಿಸಲಾಗಿದೆ. ಮಂಗಳವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಾವಾರ ಅಲಿ ಮಿರ್ಜಾ ರಸ್ತೆಯಲ್ಲಿ ಸಾಜಿದಾ ನಡೆದುಕೊಂಡು ಹೋಗುತ್ತಿದ್ದರು. ಮೊದಲೇ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ದುಷ್ಕರ್ಮಿಗಳು ಆಕೆ ಸಾಗುವ ಹಾದಿಯಲ್ಲಿ ಬೈಕ್‌ನಲ್ಲಿ ಬಂದು ನಿಂತಿದ್ದರು. ತನ್ನ ಪಾಡಿಗೆ ತಾನು ತೆರಳುತ್ತಿದ್ದಾಗ ಹಿಂದಿನಿಂದ ಓರ್ವ ಹಿಂಬಾಲಿಸುತ್ತಾನೆ. ಇದೇ ದಾರಿಯಲ್ಲಿ ಸ್ವಲ್ಪ ಮುಂದೆ ಮತ್ತೋರ್ವ ಬೈಕ್ ಮೇಲೆ ನಿಂತಿದ್ದ. ಆಗ ಸಮಯ ಸಾಧಿಸಿ ಹಿಂಬಾಲಕ ದುಷ್ಕರ್ಮಿ ಆಕೆಯ ತಲೆಗೆ ನೇರವಾಗಿ ಗುಂಡು ಹಾರಿಸುತ್ತಾನೆ. ಸಾಜಿದಾ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ನಂತರ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗುತ್ತಾರೆ.
ದಾಳಿಯ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಮುಜಾಫರ್‌ಪುರ ನಗರ ಠಾಣೆ ಎಎಸ್ಪಿ ಅವಧೇಶ್ ದೀಕ್ಷಿತ್ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲೇ ಮಹಿಳೆ ಮೃತಪಟ್ಟಿದ್ದು ಖಚಿತವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಹಲವು ಬುಲೆಟ್ ಕೇಸಿಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಎಸ್ಪಿ ದೀಕ್ಷಿತ್, ''ಮೃತ ಮಹಿಳೆ ಫಿಸಿಯೋಥೆರಪಿಗೆ ಒಳಗಾಗಿ ಮನೆಗೆ ಮರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ದುಷ್ಕರ್ಮಿಗಳು ಆಕೆಗೆ ಗುಂಡು ಹಾರಿಸಿದ್ದಾರೆ. ಕೊಲೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ'' ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ''ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಂಜಾಬ್: ಮೂವರು ಹೆಣ್ಣು ಮಕ್ಕಳ ಕೊಂದ ಕುಡುಕ ತಂದೆ