ಕತಿಹಾರ್ (ಬಿಹಾರ): ಒಂದೇ ಕುಟುಂಬದ ಮೂವರನ್ನು ಮನೆಯಲ್ಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದವರನ್ನು 35 ವರ್ಷದ ಸಫಾದ್ ಜರೀನ್ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳಾದ ಎಂಟು ವರ್ಷದ ಮಗಳು ಮತ್ತು ಐದು ವರ್ಷದ ಮಗ ಎಂದು ಗುರುತಿಸಲಾಗಿದೆ.
ಬಲ್ಲಿಯಾ ಬೆಲೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗ್‌ಪುರ ಎಂಬ ಪುಟ್ಟ ಗ್ರಾಮದಲ್ಲಿ ಮಂಗಳವಾರ ರಾತ್ರಿ ಭಯಾನಕ ಘಟನೆ ಜರುಗಿದೆ. ಸಫಾದ್ ಜರೀನ್ ಪತಿ ಫಿರೋಜ್ ಅಖ್ತರ್ ಮನೆಯಲ್ಲಿ ಇರದೇ ಇರುವ ಸಮಯದಲ್ಲಿ ಈ ತ್ರಿವಳಿ ಕೊಲೆಗಳು ನಡೆದಿವೆ. ಮೊಹರಂ ಆಚರಣೆಯ ನಂತರ ಫಿರೋಜ್ ಅಖ್ತರ್ ಬ್ಲ್ಯಾಕ್‌ಜಾಕ್ ಆಟವನ್ನು ವೀಕ್ಷಿಸಲು ಹೋಗಿದ್ದರು ಎಂದು ಹೇಳಲಾಗಿದೆ. ಆದರೆ, ಈ ಕೊಲೆಯಲ್ಲಿ ಪತಿ ಫಿರೋಜ್ ಕೈವಾಡ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆ ಮತ್ತು ಮೃತ ಸಫಾದ್ ಜರೀನ್ ತಾಯಿ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಫಿರೋಜ್ನನ್ನು ಬಂಧಿಸಿದ್ದಾರೆ. ಆರೋಪಿಯು ತನ್ನ ಮಗಳಿಗೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದ. ಅಲ್ಲದೇ, ಆರೋಪಿ ಫಿರೋಜ್ ಎರಡನೇ ಮದುವೆಯಾಗಿದ್ದಾನೆ. ಈ ಮದುವೆ ನಂತರ ಸಫಾದ್ ಜರೀನ್ ಮತ್ತು ಆಕೆಯ ಮಕ್ಕಳನ್ನು ತನ್ನ ಮನೆಯಲ್ಲಿ ಇರಿಸಿಕೊಳ್ಳಲು ಆಸಕ್ತಿ ಹೊಂದಿರಲಿಲ್ಲ ಎಂದು ಕೊಲೆಯಾದ ಸಫಾದ್ ತಾಯಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫಿರೋಜ್ನನ್ನು ಬಂಧಿಸಲಾಗಿದೆ ಎಂದು ಕತಿಹಾರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಸಫಾದ್ ಜರೀನ್ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಹರಿತವಾದ ವಸ್ತುವಿನಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ. ತನಿಖಾಧಿಕಾರಿಗಳು ಅಪರಾಧದ ಸ್ಥಳದಿಂದ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಬಲ್ಲಿಯಾ ಬೆಲೋನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರವೀಂದ್ರ ಕುಮಾರ್ ಮಾತನಾಡಿ, ಆರೋಪಿ ಫಿರೋಜ್ ಗ್ರಾಮದ ಸಮೀಪವಿರುವ ಮೊಹರಂ ಜಾತ್ರೆಗೆ ಹೋಗಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲಿಂದ ಹಿಂದಿರುಗಿದ ನಂತರ ಹೆಂಡತಿ ಮತ್ತು ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮುಂದಿನ ಕೋಣೆಯಲ್ಲಿ ಮಲಗಿದ್ದ ತನ್ನ ಎರಡನೇ ಪತ್ನಿಗೆ ಈ ಘಟನೆಯ ಬಗ್ಗೆ ಗೊತ್ತಿಲ್ಲ ಎಂಬುದಾಗಿ ಫಿರೋಜ್ ಹೇಳಿಕೊಂಡಿದ್ದಾನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹೋದರ ಸಂಬಂಧಿಯಿಂದ ಹತ್ಯೆ : ಆರೋಪಿ ಬಂಧನ